ADVERTISEMENT

ಹೆಗ್ಗೇರಿಯ ಪಾದಗಟ್ಟಿಯ ದೇವಸ್ಥಾನ, ದರ್ಗಾ ತೆರವು

ಹೆಗ್ಗೇರಿಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 16:20 IST
Last Updated 4 ಆಗಸ್ಟ್ 2021, 16:20 IST
ಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ರಸ್ತೆಗೆ ಹೊಂದಿಕೊಂಡಂತೆ ಅನಧಿಕೃತವಾಗಿ ನಿರ್ಮಿಸಿದ್ದ ಹುಲಿಗೆಮ್ಮ ದೇವಸ್ಥಾನವನ್ನು ಮಹಾನಗರ ಪಾಲಿಕೆಯಿಂದ ಬುಧವಾರ ತೆರವುಗೊಳಿಸಲಾಯಿತು
ಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ರಸ್ತೆಗೆ ಹೊಂದಿಕೊಂಡಂತೆ ಅನಧಿಕೃತವಾಗಿ ನಿರ್ಮಿಸಿದ್ದ ಹುಲಿಗೆಮ್ಮ ದೇವಸ್ಥಾನವನ್ನು ಮಹಾನಗರ ಪಾಲಿಕೆಯಿಂದ ಬುಧವಾರ ತೆರವುಗೊಳಿಸಲಾಯಿತು   

ಹುಬ್ಬಳ್ಳಿ: ಹೆಗ್ಗೇರಿಯ ಪಾದಗಟ್ಟಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಹುಲಿಗೆಮ್ಮ ದೇವಸ್ಥಾನ ಮತ್ತುಮೆಹಬೂಬ್ ಸುಬಾನಿ ಜಂಡಾಕಟ್ಟಾ ದರ್ಗಾವನ್ನು ಬುಧವಾರ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.

ಬೆಳಿಗ್ಗೆ 6.30ರ ಸುಮಾರಿಗೆ ಜೆಸಿಬಿಯೊಂದಿಗೆ ರಸ್ತೆಗೆ ಹೊಂದಿಕೊಂಡಂತಿದ್ದ ಎರಡೂ ಧಾರ್ಮಿಕ ಕೇಂದ್ರಗಳನ್ನು ನೆಲಸಮಗೊಳಿಸಿದರು.ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ 35ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ನಗರ ಸಶಸ್ತ್ರ ಮೀಸಲು ಪಡೆಯ ಎರಡು ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದವು.

‘ಸು‍ಪ್ರೀಂಕೋರ್ಟ್ ಆದೇಶದ ಮೇರೆಗೆ ಸಾರ್ವಜನಿಕ ಸ್ಥಳದಲ್ಲಿದ್ದ ದೇವಸ್ಥಾನ ಮತ್ತು ದರ್ಗಾ ತೆರವು ಮಾಡಲಾಗಿದೆ. ಈ ಕುರಿತು, ಮುಂಚೆಯೇ ಸ್ಥಳೀಯರೊಂದಿಗೆ ಸಭೆ ನಡೆಸಿ ತೆರವು ಕುರಿತು ಮಾಹಿತಿ ನೀಡಲಾಗಿತ್ತು. ಅವರ ಸಹಕಾರದಿಂದಲೇ ಕಾರ್ಯಾಚರಣೆ ನಡೆಯಿತು’ ಎಂದು ವಲಯ 10ರ ಸಹಾಯಕ ಆಯುಕ್ತ ತಿರುಪತಿ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮೂರ್ತಿ ಸ್ಥಳಾಂತರ: ದೇವಸ್ಥಾನದಲ್ಲಿದ್ದ ಹುಲಿಗೆಮ್ಮ ಮೂರ್ತಿಯನ್ನು ಸ್ಥಳೀಯರು ಪಕ್ಕದ ಲೋಕೂರ ದ್ಯಾಮಮ್ಮ ದೇವಸ್ಥಾನಕ್ಕೆ ಸ್ಥಳಾಂತರಿಸಿದರು. ಹಿರಿಯರ ಸಮ್ಮುಖದಲ್ಲಿ ದೇಗುಲದ ಎದುರಿಗೆ ತಾತ್ಕಾಲಿಕವಾಗಿ ಮೂರ್ತಿ ಪ್ರತಿಷ್ಠಾಪಿಸಿದರು.

‘ಅರವತ್ತು ವರ್ಷಗಳ ಹಿಂದೆ ಇಲ್ಲಿ ದೇವಸ್ಥಾನ ನಿರ್ಮಿಸಲಾಗಿತ್ತು. ಈಗ ಪಾಲಿಕೆಯವರು ದೇವಸ್ಥಾನ ನೆಲಸಮಗೊಳಿಸಿದ್ದಾರೆ. ಬೇರೆ ಜಾಗದಲ್ಲಿ ದೇಗುಲ ನಿರ್ಮಿಸಿ, ಅಲ್ಲಿ ದೇವಿ ಪ್ರತಿಷ್ಠಾಪಿಸಲಾಗುವುದು’ ಎಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಪಾರವ್ವ ಚಲವಾದಿ ಹಾಗೂ ಸ್ಥಳೀಯರಾದಲಕ್ಷ್ಮಣ ಬೊಮ್ಮಣ್ಣ ಪಾರ್ಸಿ ಹೇಳಿದರು.

ಬೇರೆ ಕಡೆ ಜಾಗ ನೀಡಲಿ: ‘ದರ್ಗಾವನ್ನು 40 ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ದರ್ಗಾ ಇದೆ ಎಂದು ಪಾಲಿಕೆಯವರು ತೆರವು ಮಾಡಿದ್ದಾರೆ. ಬೇರೆ ಕಡೆ ಜಾಗ ಕೊಟ್ಟರೆ, ಅಲ್ಲಿ ದರ್ಗಾ ನಿರ್ಮಿಸಿಕೊಳ್ಳುತ್ತೇವೆ’ ಎಂದು ಸ್ಥಳೀಯರಾದ ಇಂತಿಯಾಜ್ ಸವಣೂರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.