ADVERTISEMENT

ಸರ್ಕಾರದಿಂದ ನಯಾಪೈಸೆ ಪಡೆಯದೆ ಸಮ್ಮೇಳನದ ಆಯೋಜನೆ: ಶಿವರಾಜ ಪಾಟೀಲ

ಅಧ್ಯಕ್ಷನಾಗಿ ಆಯ್ಕೆಯಾದರೆ ಅವಧಿ ಕಡಿತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 8:59 IST
Last Updated 3 ಫೆಬ್ರುವರಿ 2021, 8:59 IST
ಪ್ರೊ. ಶಿವರಾಜ ಪಾಟೀಲ
ಪ್ರೊ. ಶಿವರಾಜ ಪಾಟೀಲ   

ಹುಬ್ಬಳ್ಳಿ: 115 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ (ಕ.ಸಾ.ಪ) ರಾಜ್ಯ ಘಟಕಕ್ಕೆ ಕಲ್ಯಾಣ ಕರ್ನಾಟಕ ಭಾಗದ ಯಾರೊಬ್ಬರೂ ಅಧ್ಯಕ್ಷರಾಗಿಲ್ಲ. ಈ ಬಾರಿ ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಐದು ವರ್ಷಗಳಿಗೆ ವಿಸ್ತರಣೆಗೊಂಡಿರುವ ಅಧ್ಯಕ್ಷರ ಅಧಿಕಾರವಧಿಯನ್ನು ಮೂರು ವರ್ಷಕ್ಕೆ ಕಡಿತ ಮಾಡಲಾಗುವುದು ಎಂದುಕಲಬುರ್ಗಿಯ ಪ್ರೊ. ಶಿವರಾಜ ಪಾಟೀಲ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಹೇಶ ಜೋಶಿ ಸೇರಿದಂತೆ ಹಲವರು ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡದವರೂ ಅಧ್ಯಕ್ಷರಾಗಲು ಕಾಯುತ್ತಿದ್ದಾರೆ.ಸಾಹಿತ್ಯ ಪರಿಷತ್‌ ನಿವೃತ್ತ ಐಎಎಸ್‌ ಅಧಿಕಾರಿಗಳ ತಂಗುದಾಣ ಅಥವಾ ಗಂಜಿಕೇಂದ್ರವಲ್ಲ’ ಎಂದರು.

’ಇದುವರೆಗೆ ಯಾವ ಮಹಿಳೆಯೂ ರಾಜ್ಯ ಘಟಕದ ಅಧ್ಯಕ್ಷರಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಓಡಾಡಿ ಕೆಲಸ ಮಾಡುವುದು ಅವರಿಗೆ ಕಷ್ಟ. ಆದ್ದರಿಂದ ನಾನು ಅಧ್ಯಕ್ಷನಾದರೆ ಮಹಿಳಾ ಸಾಹಿತಿಗೆ ಅಧ್ಯಕ್ಷ ಸ್ಥಾನಕ್ಕೆ ಸರಿಸಮನಾದ ಹುದ್ದೆ ನೀಡುತ್ತೇನೆ’ ಎಂದರು.

ADVERTISEMENT

ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಳೆ, ಅವಕಾಶ ನೀಡದೆ ಮಹಿಳೆ ಅಧ್ಯಕ್ಷೆಯಾಗುವುದು ಹೇಗೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ರಾಜ್ಯದ ಯಾವುದೇ ಭಾಗದಿಂದ ಮಹಿಳೆ ಸ್ಪರ್ಧಿಸಿದರೆ ನಾನು ಕಣದಿಂದ ಹಿಂದೆ ಸರಿಯುತ್ತೇನೆ’ ಎಂದರು.

’ಕೋವಿಡ್‌ ಸಮಯವಿದ್ದರೂ ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಇತ್ತೀಚೆಗಿನ ಸಮ್ಮೇಳನಗಳು ಜಾತ್ರೆಯಂತಾಗಿದ್ದು, ರಾಜಕಾರಣಿಗಳೇ ತುಂಬಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಾಹಿತ್ಯ ಪರಿಷತ್‌ನ ಅಮೃತ ನಿಧಿ ಯೋಜನೆಯಡಿ ಪ್ರತಿ ಕನ್ನಡಿಗನಿಂದ ₹10 ಮತ್ತು ಪ್ರತಿ ಸರ್ಕಾರಿ ನೌಕರನಿಂದ ₹100 ಸಂಗ್ರಹಿಸಿ ಸರ್ಕಾರದ ನಯಾಪೈಸೆ ಅನುದಾನ ಪಡೆಯದೆ ಸಮ್ಮೇಳನ ಆಯೋಜಿಸುವ ಯೋಜನೆಯಿದೆ’ ಎಂದರು.

’ಈಗಿನವರಲ್ಲಿ ಬಹಳಷ್ಟು ಜನ ಬಿಜೆಪಿ, ಕಾಂಗ್ರೆಸ್‌ ಸಾಹಿತಿಗಳಾಗಿದ್ದಾರೆ. ಅಧ್ಯಕ್ಷರಾಗಲು ₹1 ಕೋಟಿ ಖರ್ಚು ಮಾಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿಯೂ ವ್ಯಕ್ತಿಯ ಸಾಧನೆ ಹಾಗೂ ಗೌರವ ಆಧಾರವಾಗಿಟ್ಟುಕೊಂಡು ನನಗೆ ಮತ ನೀಡುತ್ತಾರೆ ಎನ್ನುವ ಭರವಸೆಯಿದೆ. ಅಧ್ಯಕ್ಷನಾದರೆ ಧಾರವಾಡದಲ್ಲಿ ಮಹಿಳಾ ಮತ್ತು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.