ADVERTISEMENT

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 6:38 IST
Last Updated 18 ಜನವರಿ 2023, 6:38 IST
   

ಹುಬ್ಬಳ್ಳಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕಳವು ಪ್ರಕರಣದ ಆರೊಪಿಯನ್ನು, ಗೋಕುಲ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.

ಇಲ್ಲಿನ ಸೆಟ್ಲಮೆಂಟ್‌ನ ಸೂರಜ್‌ ಬಿಜವಾಡ ತಲೆಮರೆಸಿಕೊಂಡಿದ್ದ ಆರೋಪಿ. ಆತ ಪುಣೆಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಮಾರ್ಗದರ್ಶನದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಎಸ್‌.ಎಂ. ಗಡ್ಡಿ ಮತ್ತು ಕಾನ್‌ಸ್ಟೆಬಲ್‌ ಹನುಮಂತ ಆಲೂರು ನೇತೃತ್ವದ ತಂಡ ಅವನನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ₹1.99 ಲಕ್ಷ ವಂಚನೆ: ಕೆವೈಸಿ ಅಪ್‌ಡೇಟ್‌ ಮಾಡದಿದ್ದರೆ ಬ್ಯಾಂಕ್‌ ಖಾತೆ ಸ್ಥಗಿತಗೊಳ್ಳಲಿದೆ ಎಂದು ಧಾರವಾಡದ ನವೀನ ಗುಮ್ಮಗೋಳ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ವ್ಯಕ್ತಿ, ಅವರಿಂದಲೇ ಬ್ಯಾಂಕ್‌ ಖಾತೆಯ ವಿವರ ಪಡೆದು ₹1.99 ಲಕ್ಷ ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ADVERTISEMENT

ನವೀನ ಅವರಿಗೆ ಕಳಹಿಸಿದ ಲಿಂಕ್‌ನಲ್ಲಿ ವಂಚಕ, ನೆಟ್‌ ಬ್ಯಾಂಕಿಂಗ್‌ ಐಡಿ, ಪಾಸ್‌ವರ್ಡ್‌, ಜನ್ಮದಿನಾಂಕ, ಮೊಬೈಲ್‌ ನಂಬರ್‌, ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ನಂಬರ್‌ ಹಾಗೂ ಎಟಿಎಂ ಕಾರ್ಡ್‌ ನಂಬರ್‌ಗಳನ್ನು ತುಂಬಿಸಿಕೊಂಡಿದ್ದಾನೆ. ನಂತರ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ, ಲ್ಯಾಪ್‌ಟಾಪ್ ದೋಚಿ ಪರಾರಿ: ಇಲ್ಲಿನ ಮಯೂರಿ ನಗರದ ನಿವಾಸಿ, ಹೈದರಾಬಾದ್‌ ಮೂಲದ ಮೆಡಪಲ್ಲಿ ಕುಮಾರ ಅವರು ಕೇಶ್ವಾಪುರದಿಂದ ಹೊಸೂರಿಗೆ ಆಟೊದಲ್ಲಿ ತೆರಳುತ್ತಿದ್ದಾಗ, ಆಟೊ ಚಾಲಕ ಮತ್ತು ಅವನ ಸ್ನೇಹಿತ ಕಿಮ್ಸ್ ಹಿಂಬದಿಯ ರಸ್ತೆಗೆ ಕರೆದೊಯ್ದು ಬೆದರಿಸಿ ₹25 ಸಾವಿರ ಮೌಲ್ಯದ ಲ್ಯಾಪ್‌ಟಾಪ್‌ ಹಾಗೂ ₹7 ಸಾವಿರ ನಗದು ಕಿತ್ತು ಪರಾರಿಯಾಗಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉರುಳಿದ ಲಾರಿ; ಚಾಲಕ ಗಂಭೀರ: ಇಲ್ಲಿನ ಗದಗ ರಸ್ತೆಯ ಐಟಿಸಿ ಗೋದಾಮು ಬಳಿ ಇಟ್ಟಂಗಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಮಗುಚಿ, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಕಲಘಟಗಿ ತಾಲ್ಲೂಕಿನ ರಾಮನಾಳ ಗ್ರಾಮದ ಚಾಲಕ ಸಂಗಪ್ಪ ಬಮ್ಮಿಗಟ್ಟಿ ಸೇರಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ನಗರದ ಹೊರವಲಯದಿಂದ ಗದಗಕ್ಕೆ ಇಟ್ಟಂಗಿಗಳನ್ನು ಸಾಗಿಸುತ್ತಿದ್ದಾಗ ಅವಘಡ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.