ಹುಬ್ಬಳ್ಳಿ: ‘ಇಂದಿನ ಸಾಹಿತ್ಯದಲ್ಲಿ ಲಲಿತ ಪ್ರಬಂಧ ಪ್ರಾಮುಖ್ಯತೆ ಪಡೆದಿದ್ದು, ಓದುಗರಿಗೆ ಭಾವನನಾತ್ಮಕ ಅನುಭವ ನೀಡುವುದರ ಜೊತೆಗೆ ಮನರಂಜನೆಯನ್ನೂ ಒದಗಿಸುತ್ತದೆ’ ಎಂದು ಸಾಹಿತಿ ಪ್ರಕಾಶ ಕಡಮೆ ಅಭಿಪ್ರಾಯಪಟ್ಟರು.
ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸಾಹಿತಿ ರವಿ ಅಂಬೋಜಿ ಅವರ ‘ಇರುವಂತೆ ಇರಬೇಕು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಲಲಿತ ಪ್ರಬಂಧದಲ್ಲಿ ಕಲ್ಪನೆಯ ಸಾಲು, ಪ್ರಕೃತಿ ಪ್ರೇಮ, ನವಿರಾದ ಭಾವ, ವಿಡಂಬನೆಗಳು ಹಾಸುಹೊಕ್ಕಾಗಿರುತ್ತವೆ. ವೈಯಕ್ತಿಕ ಅನುಭವದ ಜೊತೆಗೆ ಭಾವನೆಗಳ ಸೊಗಸು ಹಾಗೂ ಬರವಣಿಗೆ ಲಾಲಿತ್ಯ ಅಲ್ಲಿ ಕಾಣಬಹುದು. ಸೃಜನಾತ್ಮಕ ಮನಸ್ಸಿನ ಭಾವನೆಗಳೇ ಬರಹರೂಪ ಪಡೆದುಕೊಳ್ಳುತ್ತದೆ’ ಎಂದರು.
‘ಬಹುತೇಕ ಸಂದರ್ಭದಲ್ಲಿ ಲಲಿತ ಪ್ರಬಂಧಗಳು ಸೂಕ್ಷ್ಮಭಾವ ಹಾಗೂ ತಿಳಿಹಾಸ್ಯದಿಂದ ಕೂಡಿರುತ್ತವೆ. ಇವು ಕಥೆಗಳಂತೆ ಗೋಚರಿಸಿದರೂ ಕಥೆಗಳಲ್ಲ. ಅಂತಹ ಹತ್ತು ಬರಹಗಳು ರವಿ ಅವರ ಪುಸ್ತಕದಲ್ಲಿವೆ. ತನ್ನೂರು, ಜನರ ಬದುಕು, ಬವಣೆ, ಮಾನವೀಯತೆ, ಜವಾರಿ ಭಾಷೆಯನ್ನು ಪ್ರಬಂಧದಲ್ಲಿ ತಿಳಿಸುತ್ತ, ಕಾಡಿನ ಅನುಭವ ಹಾಗೂ ಪರಿಸರ ಪ್ರಜ್ಞೆಯ ಬಗ್ಗೆ ಮನಮುಟ್ಟುವ ಹಾಗೆ ಹೇಳುತ್ತಾರೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಸ್ಕಾಂ ಎಂಜಿನಿಯರ್ ಕಿರಣಕುಮಾರ ಬಿ., ‘ಪುಸ್ತಕದ ಹೆಸರು ಆಕರ್ಷಿಸುವಂತಿದ್ದು, ಅದರಲ್ಲಿರುವ ಒಂದೊಂದು ಗದ್ಯವೂ ಓದುಗನಿಗೆ ಆಪ್ತವಾಗುತ್ತದೆ. ರವಿ ಅವರ ಮೊದಲ ಪುಸ್ತಕ ಮಾರ್ಗದಾಳು ಈಗಾಗಲೇ ಓದುಗರ ಮೆಚ್ಚುಗೆ ಪಡೆದು, ಮೂರು ಮುದ್ರಣ ಕಂಡಿದೆ. ಹೆಸ್ಕಾಂ ಇಲಾಖೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿ ಬೆಳಕು ನೀಡುವ ಯೋಧನ ಅನುಭವ–ಕಲ್ಪನೆಯ ಬರಹಗಳು ಇವು’ ಎಂದರು.
ಸಾಹಿತಿ ಮಹಾಂತಪ್ಪ ನಂದೂರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ, ಕೃತಿಕಾರ ರವಿ ಅಂಬೋಜಿ, ಚಿದಾನಂದ ಕಂಬಾರ, ವಿಜಯಕುಮಾರ, ಮಂಜುನಾಥ ದೊಡ್ಡಮನಿ, ಸಂಜೀವ ಧುಮ್ಮಕನಾಳ ಇದ್ದರು.
ಪುಸ್ತಕದ ಹೆಸರು: ಇರಬೇಕು ಇರುವಂತೆ
ಕೃತಿಕಾರ: ರವಿ ಅಂಬೋಜಿ
ಪ್ರಕಟಣೆ: ಸಪ್ತಮಿ ಕಾಶನ
ದರ: ₹100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.