ADVERTISEMENT

ಮೂರು ವರ್ಷಗಳಾದರೂ ಉದ್ಘಾಟನೆಯಾಗದ ಆಸ್ಪತ್ರೆ

ಬಡವರಿಗೆ ಉಪಯೋಗವಾಗಬೇಕಿದ್ದ ಕಟ್ಟಡದಲ್ಲಿ ಪುಂಡರ ಹಾವಳಿ, ಗಾಜು ಪುಡಿ ಪುಡಿ

ಪ್ರಮೋದ
Published 10 ಜೂನ್ 2021, 6:30 IST
Last Updated 10 ಜೂನ್ 2021, 6:30 IST
ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ನಿರ್ಮಾಣವಾಗಿ ಮೂರು ವರ್ಷ ಕಳೆದಿರುವ ಆಸ್ಪತ್ರೆ ಕಟ್ಟಡದ ನೋಟ –ಪ್ರಜಾವಾಣಿ ಚಿತ್ರ/ಗುರು ಹಬೀಬ
ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ನಿರ್ಮಾಣವಾಗಿ ಮೂರು ವರ್ಷ ಕಳೆದಿರುವ ಆಸ್ಪತ್ರೆ ಕಟ್ಟಡದ ನೋಟ –ಪ್ರಜಾವಾಣಿ ಚಿತ್ರ/ಗುರು ಹಬೀಬ   

ಹುಬ್ಬಳ್ಳಿ: ಕೋವಿಡ್‌ ಸಂಕಷ್ಟದ ಕಾಲದಲ್ಲಿ ಕೋವಿಡೇತರ ರೋಗಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ. ಆದರೆ, ಸೋನಿಯಾ ಗಾಂಧಿ ಹಾಗೂ ಎಸ್‌.ಎಂ. ಕೃಷ್ಣ ನಗರಗಳಲ್ಲಿ ಆಸ್ಪತ್ರೆ ಸಲುವಾಗಿ ಮೂರು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಕಟ್ಟಡದಲ್ಲಿ ಇನ್ನೂ ಆಸ್ಪತ್ರೆ ಆರಂಭವಾಗಿಲ್ಲ.

ಹೀಗಾಗಿ ಅಲ್ಲಿನ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಜನ ಸಣ್ಣ ಆರೋಗ್ಯ ಸಮಸ್ಯೆಗೂ ಪರದಾಡುವಂತಾಗಿದೆ.

ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಎರಡೂ ಆಸ್ಪತ್ರೆಗಳ ಕಟ್ಟಡಗಳ ನಿರ್ಮಾಣಕ್ಕೆ ಪ್ರಸಾದ ಅಬ್ಬಯ್ಯ ಅವರು ಶಾಸಕರ ಅನುದಾನದಲ್ಲಿ ತಲಾ ₹75 ಲಕ್ಷ ನೀಡಿದ್ದರು. ಸೋನಿಯಾ ಗಾಂಧಿ ನಗರದಲ್ಲಿಯೇ 1,400ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಅದರ ಸುತ್ತಲೂ ಬೀಡಿ ಕಾರ್ಮಿಕರ ಕಾಲೊನಿ, ಬಿಡ್ನಾಳ ಸೇರಿದಂತೆ ಹಲವಾರು ಬಡಾವಣೆಗಳಿವೆ.

ADVERTISEMENT

ಎಸ್‌.ಎಂ. ಕೃಷ್ಣ ನಗರದಲ್ಲಿ 1,600ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಬಡಾವಣೆಯ ಅಕ್ಕಪಕ್ಕದಲ್ಲಿರುವ ಈಶ್ವರ ನಗರ, ಎನ್‌.ಎ. ನಗರ, ಅಲ್ತಾಫ್‌ ಪ್ಲಾಟ್‌ ಹಾಗೂ ಇಬ್ರಾಹಿಂಪುರಗಳ ಜನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹಳೇ ಹುಬ್ಬಳ್ಳಿ, ಚಿಟಗುಪ್ಪಿ ಅಥವಾ ಕಿಮ್ಸ್ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಈ ಎರಡೂ ಬಡಾವಣೆ ಹಾಗೂ ಸುತ್ತಮುತ್ತಲೂ ಇರುವವರು ಬಹುತೇಕರು ಬಡವರು. ದಿನದ ಕೂಲಿಯನ್ನೇ ನಂಬಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕೆಮ್ಮು, ನೆಗಡಿ, ಜ್ವರ ಹೀಗೆ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ನೂರಾರು ರೂಪಾಯಿ ಖರ್ಚು ಮಾಡಿ ಆಸ್ಪತ್ರೆಗೆ ಹೋಗುವಷ್ಟು ಸ್ಥಿತಿವಂತರಲ್ಲ.

ಆದ್ದರಿಂದಲೇ ಈ ಎರಡೂ ಬಡಾವಣೆಗಳಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೊಠಡಿ, ವಿಶೇಷ ವಾರ್ಡ್‌, ಲಾಬಿ, ವಾಹನಗಳ ನಿಲುಗಡೆಗೆ ಸೌಲಭ್ಯ ಹೀಗೆ ಸಣ್ಣ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ಸೌಲಭ್ಯಗಳೂ ಇವೆ. ಆದರೆ, ಈ ಖಾಲಿ ಕಟ್ಟಡಗಳಿಗೆ ಮೂರು ವರ್ಷಗಳಿಂದ ‘ಆಸ್ಪತ್ರೆ’ಯಾಗುವ ಭಾಗ್ಯ ಸಿಕ್ಕಿಲ್ಲ.

ಗಾಜು ಪುಡಿ ಪುಡಿ, ಪುಂಡರ ಹಾವಳಿ

ಸೋನಿಯಾ ಗಾಂಧಿ ನಗರದಲ್ಲಿ ಸ್ಥಳೀಯರು ನಿಗಾ ವಹಿಸಿರುವುದ‌ರಿಂದ ಕಟ್ಟಡ ಸುಸಜ್ಜಿತವಾಗಿ ಉಳಿದುಕೊಂಡಿದೆ. ಆದರೆ, ಎಸ್‌.ಎಂ. ಕೃಷ್ಣ ನಗರದಲ್ಲಿ ಪುಂಡರ ಹಾವಳಿಯಿಂದಾಗಿ ಕಟ್ಟಡದ ಎಲ್ಲ ಗಾಜುಗಳು ಪುಡಿ ಪುಡಿಯಾಗಿವೆ. ಆವರಣದಲ್ಲಿ ಗುಟುಕಾ, ಮದ್ಯ ಬಾಟಲಿಯ ತ್ಯಾಜ್ಯದ ರಾಶಿ ಬಿದ್ದಿದೆ. ಕಟ್ಟಡದ ಒಳಗೆ ಹಾಕಿರುವ ವಿದ್ಯುತ್‌ ಸ್ವಿಚ್‌ ಬೋರ್ಡ್‌ಗಳನ್ನೂ ಪುಂಡರು ಬಿಟ್ಟಿಲ್ಲ!

ಆಸ್ಪತ್ರೆ ಕಾರ್ಯಾರಂಭ ಮಾಡಿದ್ದರೆ ಜನರ ಓಡಾಟ ಇರುತ್ತಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡ ಖಾಲಿ ಬಿಟ್ಟರೆ ಏನು ಪ್ರಯೋಜನ? ಸರ್ಕಾರದ ದುಡ್ಡಿನಲ್ಲಿ ಪುಂಡರು ಮಜಾ ಮಾಡುವಂತಾಗಿದೆ ಎಂದು ಸ್ಥಳೀಯರು ಬೇಸರ ತೋಡಿಕೊಂಡರು.

ಪಾಲಿಕೆ ನಿರ್ವಹಣೆ ಮಾಡಲಿ: ‘ಆರೋಗ್ಯ ಇಲಾಖೆ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿ ನೇಮಿಸಿ, ಮಹಾನಗರ ಪಾಲಿಕೆ ನಿರ್ವಹಣೆ ಮಾಡಿದರೆ ಲಕ್ಷಾಂತರ ಬಡವರಿಗೆ ಅನುಕೂಲವಾಗುತ್ತದೆ. ಇದರಿಂದ ಕಿಮ್ಸ್‌ ಹಾಗೂ ಚಿಟಗುಪ್ಪಿ ಆಸ್ಪತ್ರೆಗಳ ಮೇಲಿರುವ ಹೊರೆಯೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆ ಹಾಗೂ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಆಗ್ರಹಿಸಿದರು.

‘ಆಸ್ಪತ್ರೆಗಳ ನಿರ್ವಹಣೆಗೆ ಸ್ಥಳೀಯ ಎನ್‌ಜಿಒಗಳು ಮುಂದೆ ಬಂದಿವೆ. ಆದರೆ, ಸರ್ಕಾರದಿಂದಲೇ ನಿರ್ವಹಣೆಯಾದರೆ ಬಡವರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಸಿಗುತ್ತದೆ. ಆ ಎರಡೂ ಆಸ್ಪತ್ರೆಗಳನ್ನು ಆರಂಭಿಸಬೇಕೆಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರಿಗೆ ಮನವಿ ಮಾಡಿಕೊಂಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ಅಬ್ಬಯ್ಯ ತಿಳಿಸಿದರು.

ಸಣ್ಣ ಆರೋಗ್ಯ ಸಮಸ್ಯೆಗೂ ಸಾವಿರಾರು ರೂಪಾಯಿ ಖರ್ಚು ಮಾಡುವಷ್ಟು ಶ್ರೀಮಂತರು ನಾವಲ್ಲ. ವಿಳಂಬ ಆಗಿದ್ದು ಸಾಕು; ತುರ್ತಾಗಿ ಆಸ್ಪತ್ರೆ ಆರಂಭಿಸಲು ಕ್ರಮ ಕೈಗೊಳ್ಳಬೇಕು.

– ಮೆಹಬೂಬ್‌ ಸಾಬ್‌ ಕೋಳೂರು, ಸೋನಿಯಾ ಗಾಂಧಿ ನಗರ ನಿವಾಸಿ


ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಖರ್ಚಾಗಿದೆ. ಆದರೆ ಬಡವರಿಗೆ ಏನೂ ಪ್ರಯೋಜನವಾಗಿಲ್ಲ. ಈಗಲಾದರೂ ಆಸ್ಪತ್ರೆ ಉದ್ಘಾಟಿಸಿ, ಸೌಲಭ್ಯ ಕಲ್ಪಿಸಿ.

– ಎಸ್‌.ಎಸ್‌. ಪಗಾಲಪುರ, ಸೋನಿಯಾ ಗಾಂಧಿನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.