ADVERTISEMENT

ಐಎಂಎ ಒತ್ತಡಕ್ಕೆ ಮಣಿಯದಿರಲು ಒತ್ತಾಯ

ಭಾರತ ಆಯುಷ್‌ ಫೆಡರೇಷನ್‌ ಕರ್ನಾಟಕ ಶಾಖೆಯ ವೈದ್ಯರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 12:53 IST
Last Updated 9 ಡಿಸೆಂಬರ್ 2020, 12:53 IST

ಹುಬ್ಬಳ್ಳಿ: ಆಯುರ್ವೇದ ಶಲ್ಯ ಮತ್ತು ಶಾಲಾಕ್ಯ ತಂತ್ರ ಸ್ನಾತಕೋತ್ತರ ಪದವಿ (ಎಂಡಿ/ಎಂಎಸ್‌) ವೈದ್ಯರು ಕೂಡ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಗೆಜೆಟೆಡ್‌ ಅಧಿಸೂಚನೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರೋಧ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಣಿಯಬಾರದು ಎಂದು ಭಾರತ ಆಯುಷ್‌ ಫೆಡರೇಷನ್‌ ಕರ್ನಾಟಕ ಶಾಖೆಯ ವೈದ್ಯರು ಮನವಿ ಮಾಡಿದ್ದಾರೆ.

ಕರ್ನಾಟಕ ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಕೇಂದ್ರದ ಈ ನಿರ್ಧಾರದಿಂದ ಆಯುರ್ವೇದ ವೈದ್ಯಶಾಸ್ತ್ರಕ್ಕೆ ದೊಡ್ಡ ಗೌರವ ಲಭಿಸಿದೆ. ಇದರಿಂದ ಆಯುರ್ವೇದದಲ್ಲಿ ಎಂ.ಡಿ. ಮತ್ತು ಎಂ.ಎಸ್‌. ಸ್ನಾತಕೋತ್ತರ ಪದವಿ ಪಡೆದವರಿಗೆ ಅನುಕೂಲವಾಗುತ್ತದೆ’ ಎಂದರು.

‘ಕೇಂದ್ರದ ಈ ನಿರ್ಧಾರಕ್ಕೆ ಐಎಂಎ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ. ಐಎಂಎ ಡಿ. 11ರಂದು ಸಾಮೂಹಿಕ ಮುಷ್ಕರ ಹಮ್ಮಿಕೊಳ್ಳುವುದಾಗಿ ತಿಳಿಸಿದೆ. ಇದು ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಡ ಹೇರುವ ತಂತ್ರವಷ್ಟೇ ಆಗಿದೆ. ಅದೇ ದಿನದಂದು ಆಯುಷ್‌ ವೈದ್ಯರು ದೇಶಾದ್ಯಂತ ಜನರಿಗೆ ಉಚಿತವಾಗಿ ಆರೋಗ್ಯ ಪರೀಕ್ಷೆ ಮಾಡಿ ಚಿಕಿತ್ಸೆ ಒದಗಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ತಿದ್ದುಪಡಿಗೆ ಆಗ್ರಹ: ‘ರಾಜ್ಯದಾದ್ಯಂತ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೋಂದಾಯಿತ ಪದವೀಧರ ಆಯುಷ್‌ ವೈದ್ಯರು ಆಯುಷ್‌ ಪದ್ಧತಿಗಳ ಜೊತೆಗೆ ಅಲೋಪತಿ ಪದ್ಧತಿಯ ಪಠ್ಯಕ್ರಮ, ತರಬೇತಿ ಮತ್ತು ಅನುಭವ ಹೊಂದಿದ್ದಾರೆ. ಆದ್ದರಿಂದ ರಾಜ್ಯದಲ್ಲಿಯೂ ಡ್ರಗ್ಸ್‌ ಮತ್ತು ಕಾಸ್ಮೆಟಿಕ್‌ ಕಾಯ್ದೆ ಹಾಗೂ ನಿಯಮಗಳಲ್ಲಿ ಕಾನೂನು ತಿದ್ದುಪಡಿ ಮಾಡಬೇಕು’ ಎಂದು ಹುದ್ದಾರ ಮನವಿ ಮಾಡಿದರು.

‘ಆಯುಷ್‌ ವೈದ್ಯರು ಪ್ರಾಥಮಿಕ ಹಂತದ ಚಿಕಿತ್ಸೆ ವೇಳೆ ಅಗತ್ಯವಿರುವ ಕೆಲವು ಆಧುನಿಕ ಪದ್ಧತಿಯ ಔಷಧಿಗಳನ್ನು ತಮ್ಮ ಪದ್ಧತಿಯ ಔಷಧಗಳೊಂದಿಗೆ ಬಳಸಿ ಚಿಕಿತ್ಸೆ ಒದಗಿಸಿ ಆರೋಗ್ಯ ಇಲಾಖೆ ಜೊತೆ ಕೈ ಜೋಡಿಸಲು ದೇಶದ 11 ರಾಜ್ಯಗಳಲ್ಲಿ ಡ್ರಗ್ಸ್‌ ಮತ್ತು ಕಾಸ್ಮೆಟಿಕ್‌ ಕಾಯ್ದೆ ಜಾರಿಗೆ ತರಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಕಾನೂನಾತ್ಮಕ ಬದಲಾವಣೆ ತರಬೇಕು’ ಎಂದರು.

ಕರ್ನಾಟಕ ಶಾಖೆಯ ರಾಜ್ಯ ಉಪಾಧ್ಯಕ್ಷ ಡಾ. ಅಮಿತ್‌ ಎಂ.ಎಸ್‌., ಸಾಮಾಜಿಕ ಜಾಲತಾಣ ನಿರ್ವಾಹಕ ಡಾ. ಪ್ರಕಾಶ ಮಾಂಡ್ರೆ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರವೀಂದ್ರ ವೈ. ಖಜಾಂಚಿ ಡಾ. ಸಿ.ಸಿ. ಹಿರೇಮಠ ಮತ್ತು ಪ್ರಧಾನ ಕಾರ್ಯದರ್ಶಿ ಶಾನಲ್‌ ಕಡಕೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.