ADVERTISEMENT

ಅಳ್ನಾವರ | ಮಳೆ ಆರ್ಭಟ; ಭೋರ್ಗೆರೆಯುತ್ತಿರುವ ಇಂದಿರಮ್ಮನ ಕೆರೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 14:36 IST
Last Updated 23 ಜುಲೈ 2021, 14:36 IST
ಅಳ್ನಾವರದ ಹಿರೇಕೆರೆಯಲ್ಲಿ ಸಾಕಿದ್ದ ಮೀನುಗಳು ನಿರಂತರ ಮಳೆಯಿಂದಾಗಿ ಕೆರೆಯಿಂದ ಹೊರಗೆ ಬಂದಿದ್ದು ಜನ ಅವುಗಳನ್ನು ಹಿಡಿದರು
ಅಳ್ನಾವರದ ಹಿರೇಕೆರೆಯಲ್ಲಿ ಸಾಕಿದ್ದ ಮೀನುಗಳು ನಿರಂತರ ಮಳೆಯಿಂದಾಗಿ ಕೆರೆಯಿಂದ ಹೊರಗೆ ಬಂದಿದ್ದು ಜನ ಅವುಗಳನ್ನು ಹಿಡಿದರು   

ಅಳ್ನಾವರ: ತಾಲ್ಲೂಕಿನಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಅನಾಹುತಗಳು ಸಂಭವಿಸಿವೆ. ಹೂಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ಭೋರ್ಗೆರೆಯುತ್ತಿದೆ.

ಕೆರೆ ನೀರು ಹರಿದು ಡೌಗಿ ನಾಲಾ ಸೇರಿ ಅಳ್ನಾವರ ಪಟ್ಟಣದ ಹೊರ ವಲಯದಲ್ಲಿ ಜಲ ದಿಗ್ಬಂದನ ಮಾಡಿದೆ. ಇಲ್ಲಿನ ದೇಸಾಯಿ ಚಾಳ, ಟಿಳಕ ನಗರ ಜಲಾವೃತವಾಗಿವೆ. ಎರಡು ಪೆಟ್ರೋಲ್‌ ಬಂಕ್‌ಗಳು ನೀರಿನಲ್ಲಿ ನಿಂತಿವೆ. ರಭಸವಾಗಿ ಹರಿಯುವ ನೀರಿನಲ್ಲಿ ಕಟ್ಟಿಗೆ ದಿಮ್ಮುಗಳು ಕೊಚ್ಚಿಹೋಗಿವೆ.

ಇಲ್ಲಿನ ರೈಲ್ವೆ ಸೇತುವೆ ಕೆಳಗೆ ನೀರು ನಿಂತಿದ್ದು, ವಾಹನಗಳ ಸಂಚಾರ ಬಂದ್ ಆಗಿದೆ. ಹಳಿಯಾಳ–ಬೆಳಗಾವಿ ಮಾರ್ಗದ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ದೇಸಾಯಿ ಚಾಳ, ಕಾಳೆ ಪ್ಲಾಟ್‌ ಹಾಗೂ ಟಿಳಕ ನಗರದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಅಗತ್ಯ ವಸ್ತುಗಳ ಸಮೇತ ಸ್ಥಳಾಂತರಿಸಲಾಗಿದೆ. ತಾತ್ಕಾಲಿಕವಾಗಿ ಉಮಾ ಭವನ ಕಲ್ಯಾಣ ಮಂಟಪದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. 40 ಜನ ಕೇಂದ್ರದಲ್ಲಿ ವಾಸವಾಗಿದ್ದಾರೆ.

ADVERTISEMENT

ಕೇಂದ್ರಕ್ಕೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಲ್ಲಿ ಕೋವಿಡ್‌ ನಿಯಮ ಪಾಲನೆ ಮಾಡುವ ಸಲುವಾಗಿ ಬೇರೆ ಕಲ್ಯಾಣ ಮಂಟಪದಲ್ಲಿ ಇರಿಸಲಾಗುವುದು. ಮನೆಗಳು ಬೀಳುವ ಅಥವಾ ಕುಸಿಯುವ ಸ್ಥಿತಿಯಲ್ಲಿದ್ದರೆ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು ಎಂದು ತಹಶೀಲ್ದಾರ್‌ ಅಮರೇಶ ಪಮ್ಮಾರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕಂಬಾರಗಣವಿಯಲ್ಲಿ ಹಳ್ಳದ ನೀರಿನ ರಭಸಕ್ಕೆ ತೇಲಿ ಹೋಗಿದ್ದ ನಾಲ್ಕು ಜಾನುವಾರುಗಳು ಈಜಿ ದಡ ಸೇರಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಹಲವೆಡೆ ಮನೆಗಳು ಬಿದ್ದಿದ್ದು, ಅವುಗಳ ಬಗ್ಗೆ ಸಮೀಕ್ಷೆ ಮಾಡಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ. ನಿರಂತರ ಮಳೆಯಿಂದಾಗಿ ಶುಕ್ರವಾರ ಬೆಳಿಗ್ಗೆಯಿಂದಲೇ ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.