ADVERTISEMENT

ಹಳೇ ಬಸ್ ನಿಲ್ದಾಣಕ್ಕೆ ಸಿಗಲಿದೆ ಹೊಸ ರೂಪ

ಟೆಂಡರ್‌ ಆಹ್ವಾನ, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳು ಕಾಲಾವಕಾಶ

ಪ್ರಮೋದ
Published 19 ನವೆಂಬರ್ 2020, 15:28 IST
Last Updated 19 ನವೆಂಬರ್ 2020, 15:28 IST
ಹೊಸದಾಗಿ ನಿರ್ಮಾಣಗೊಳ್ಳಲಿರುವ ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ನೋಟ –ಚಿತ್ರ/ಗುರು ಹಬೀಬ
ಹೊಸದಾಗಿ ನಿರ್ಮಾಣಗೊಳ್ಳಲಿರುವ ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣದ ನೋಟ –ಚಿತ್ರ/ಗುರು ಹಬೀಬ   

ಹುಬ್ಬಳ್ಳಿ: ವಾಣಿಜ್ಯ ನಗರದ ಹೃದಯಭಾಗದಲ್ಲಿರುವ ಹಳೇ ಬಸ್‌ ನಿಲ್ದಾಣದ ಜಾಗದಲ್ಲಿ ಆಧುನಿಕ ಸೌಲಭ್ಯಗಳುಳ್ಳ ಹೊಸ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಜನವರಿ ಅಂತ್ಯದ ವೇಳೆಗೆ ಕಾಮಗಾರಿ ಆರಂಭವಾಗಲಿದ್ದು, ಮುಂದಿನ 18 ತಿಂಗಳಲ್ಲಿ ಹಳೇ ನಿಲ್ದಾಣಕ್ಕೆ ಹೊಸ ರೂಪ ಸಿಗಲಿದೆ.

1964ರಲ್ಲಿ ಈ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. ಇದಕ್ಕೆ ಹಲವು ಬಾರಿ ಬಣ್ಣ ಹಚ್ಚಿ, ವಿನ್ಯಾಸದಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಮೊದಲ ಬಾರಿಗೆ ಬಸ್‌ ನಿಲ್ದಾಣವನ್ನು ಸಂಪೂರ್ಣ ಕೆಡವಿ, ಸ್ಮಾರ್ಟ್‌ ಸಿಟಿ ಯೋಜನೆಯಡಿ ₹40 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲು ಟೆಂಡರ್‌ ಕರೆಯಲಾಗಿದೆ.

ಹೊಸ ಕಟ್ಟಡದಲ್ಲಿ ಮೂರು ಮಹಡಿಗಳಿರಲಿವೆ. ನೆಲಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌, ಅದರ ಮೇಲೆ ನಗರ ಸಾರಿಗೆ ಮತ್ತು ಬಿಆರ್‌ಟಿಎಸ್‌ ಬಸ್‌ಗಳಿಗೆ, ಕೊನೆ ಮಹಡಿಯಲ್ಲಿ ಉಪನಗರ, ನಗರ ಮತ್ತು ಗ್ರಾಮೀಣ ಸಾರಿಗೆ ಬಸ್‌ಗಳಿಗೆ ಪ್ರತ್ಯೇಕ ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗುತ್ತದೆ.

ADVERTISEMENT

ಸಿಬ್ಬಂದಿ ವಿಶ್ರಾಂತಿಗೆ, ಪ್ರಥಮ ಚಿಕಿತ್ಸೆಗೆ, ಪ್ರಯಾಣಿಕರ ಕಾಯುವಿಕೆಗೆ ಕೊಠಡಿಗಳಿರಲಿವೆ.ನಿಲ್ದಾಣದ ಆವರಣ ಗೋಡೆಯ ಸುತ್ತಲೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕೊಳವೆ ವ್ಯವಸ್ಥೆ ಮಾಡಲಾಗುತ್ತದೆ. ನಿಲ್ದಾಣದ ಮುಂಭಾಗದಲ್ಲಿ ಆಟೊ ನಿಲುಗಡೆ ವ್ಯವಸ್ಥೆ ಮತ್ತು ಪೊಲೀಸ್‌ ಸಿಬ್ಬಂದಿಗೆ ಕೊಠಡಿ ಸೌಲಭ್ಯವೂ ಇರಲಿದೆ. ನಗರ ಸಾರಿಗೆ ಬಸ್‌ಗಳು ನಿಲ್ದಾಣ ಪ್ರವೇಶಿಸಲು ಮೂರು ಲೈನ್‌ಗಳ ವ್ಯವಸ್ಥೆ ಇರಲಿದೆ. ಬಸ್‌ ಮತ್ತು ಪ್ರಯಾಣಿಕರು ಮೇಲಿನ ಅಂತಸ್ತಿಗೆ ಹೋಗಲು ರ‍್ಯಾಂಪ್‌ ಸೌಲಭ್ಯ ಕಲ್ಪಿಸಲಾಗುತ್ತದೆ. ಹೊಸ ನಿಲ್ದಾಣದಲ್ಲಿ ಒಂದೇ ಬಾರಿಗೆ 11 ಬಿಆರ್‌ಟಿಎಸ್‌ ಬಸ್‌ಗಳು, 10 ನಗರ ಸಾರಿಗೆ ಮತ್ತು 14 ಉಪನಗರ ಸಾರಿಗೆ ಬಸ್‌ಗಳನ್ನು ನಿಲ್ಲಿಸಲು ಪ್ಲಾಟ್‌ ಫಾರ್ಮ್‌ಗಳು ನಿರ್ಮಾಣವಾಗಲಿವೆ. ಚಾಲಕರು ಹಾಗೂ ನಿರ್ವಾಹಕರು ವಿಶ್ರಾಂತಿ ಪಡೆಯುವ ವೇಳೆ ಬಸ್‌ಗಳನ್ನು ನಿಲ್ಲಿಸಲು ಪ್ರತ್ಯೇಕ ಸೌಲಭ್ಯ ಇರಲಿದ್ದು, ಅಲ್ಲಿ ಒಟ್ಟಿಗೆ 15 ಬಸ್‌ಗಳನ್ನು ನಿಲ್ಲಿಸುವಷ್ಟು ಜಾಗವಿರುತ್ತದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ‘ಹಳ್ಳಿಗಳಿಂದ ಬರುವ ಜನರಿಗೆ ತಮ್ಮೂರಿನ ಬಸ್‌ಗಳು ಸುಲಭವಾಗಿ ಗೊತ್ತಾಗುವಂತೆ ಮಾಡಲು ಪ್ರತ್ಯೇಕ ಮಹಡಿಯಲ್ಲಿ ಸಾರಿಗೆ ವ್ಯವಸ್ಥೆ ಇರಲಿದೆ. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪರಿಣಿತರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಡಿಪಿಆರ್‌ ತಯಾರಿಸಲಾಗಿದೆ. ಜನವರಿ ಮೂರನೇ ವಾರದ ವೇಳೆಗೆ ಹಳೇ ಬಸ್‌ ನಿಲ್ದಾಣ ನಮಗೆ ಹಸ್ತಾಂತರಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಕ ಎಚ್‌. ರಾಮನಗೌಡ ಪ್ರತಿಕ್ರಿಯಿಸಿ ‘ಹಳೇ ಬಸ್‌ ನಿಲ್ದಾಣದಿಂದ ಸಂಚರಿಸುವ ಬಸ್‌ಗಳನ್ನು ಹಂತ, ಹಂತವಾಗಿ ಕಡಿಮೆ ಮಾಡುತ್ತಿದ್ದೇವೆ. ಹುಬ್ಬಳ್ಳಿಯಿಂದ ಹೋಗುವ ಗ್ರಾಮಾಂತರ ಸಾರಿಗೆ ಮತ್ತು ಬಿಆರ್‌ಟಿಎಸ್‌ ಬಸ್‌ಗಳು ಮಾತ್ರ ಇದ್ದು, ಅವುಗಳನ್ನೂ ಗೋಕುಲ, ಹೊಸೂರು ನಿಲ್ದಾಣಗಳಿಗೆ ಸ್ಥಳಾಂತರಿಸಲಾಗುವುದು’ ಎಂದರು.

1964ರಲ್ಲಿ ನಿರ್ಮಾಣವಾಗಿದ್ದ ಬಸ್‌ ನಿಲ್ದಾಣ

ನಿಯಮ ಮೀರದಂತೆ ಎಚ್ಚರ ವಹಿಸಲು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಚಾಲಕರು, ನಿರ್ವಾಹಕರ ವಿಶ್ರಾಂತಿಗೆ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.