ಹುಬ್ಬಳ್ಳಿ: ಕುಸ್ತಿಪಟು ಕುಟುಂಬದ ಹಿನ್ನೆಲೆಯ ಶಿಲ್ಪಾ ಹೊಸಮನಿ, ಅಥ್ಲೆಟಿಕ್ಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಅವರು, ಸದ್ಯ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ. 800 ಮೀ., 1,500 ಮೀ., ಕ್ರಾಸ್ ಕಂಟ್ರಿ, 1000 ಮೀ., ಓಟದ ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಅವರು ಪದಕ ಗಳಿಸಿದ್ದಾರೆ.
ಪ್ರಸಕ್ತ ವರ್ಷದ ಮೇ 11ರಿಂದ 14ವರೆಗೆ ಪಾಟಲಿಪುತ್ರದಲ್ಲಿ ನಡೆದ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ 800 ಮೀ. ಓಟದ ಸ್ಪರ್ಧೆಯಲ್ಲಿ (2ನಿ, 14.86 ಸೆ) ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಗಳಿಸಿದ್ದಾರೆ.
2024ರ ಜನವರಿಯಲ್ಲಿ ಬಿಹಾರದಲ್ಲಿ ನಡೆದ 58ನೇ ರಾಷ್ಟ್ರೀಯ ಕ್ರಾಸ್‌ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 4 ಕಿ.ಮೀ ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಅದೇ ವರ್ಷ ದಸರಾ ಸಿ.ಎಂ ಕಪ್ ಕ್ರೀಡಾಕೂಟದ 800 ಮೀ.ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಕೂಟ ದಾಖಲೆ (2ನಿ, 16.13 ಸೆ) ನಿರ್ಮಿಸಿದ್ದಾರೆ.
ಪ್ರಸಕ್ತ ವರ್ಷ ಜನವರಿಯಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದಿಂದ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ 68ನೇ ಸ್ಕೂಲ್ ಗೇಮ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 800 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ (2ನಿ,13.61 ಸೆ) ಪಡೆದಿದ್ದಾರೆ.
ಶಿಲ್ಪಾ ಸಾಧನೆ: 2023ರಲ್ಲಿ ಅಸ್ಸಾಂನಲ್ಲಿ ನಡೆದ 57ನೇ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ 2 ಕಿ.ಮೀ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಆರನೇ ಸ್ಥಾನ, 2024ರಲ್ಲಿ ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಜ್ಯೂನಿಯರ್ ಮತ್ತು 23 ವರ್ಷದೊಳಗಿನವರ ಅಥ್ಲೆಟಿಕ್ಸ್ ಕ್ರೀಡಾಕೂಟದ 1000 ಮೀ. ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 2025ರ ಜನವರಿಯಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್‌ನಿಂದ ಮಂಗಳೂರಿನಲ್ಲಿ ನಡೆದ ಕ್ರೀಡಾಕೂಟದ 1500 ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
‘ನನ್ನ ಅಜ್ಜ, ತಂದೆ ಕುಸ್ತಿ ಪಟುಗಳು. ನನ್ನನ್ನು ಕುಸ್ತಿಪಟುವಾಗಿ ಮಾಡಬೇಕು ಎಂಬುದು ಅವರ ಕನಸಾಗಿತ್ತು. ತೂಕ ಕಡಿಮೆ ಇದ್ದ ಕಾರಣಕ್ಕೆ ಬೆಳಗಾವಿಯಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ಕುಸ್ತಿ ತರಬೇತಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ ಅಥ್ಲೆಟಿಕ್ಸ್‌ನಲ್ಲಿ ಮುಂದುವರಿದೆ’ ಎನ್ನುತ್ತಾರೆ ಶಿಲ್ಪಾ.
ಶಿಲ್ಪಾ ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಸಾಧನೆ ಮಾಡುವ ಸಾಮರ್ಥ್ಯ ಅವರಲ್ಲಿದೆ. ಪ್ರೋತ್ಸಾಹ ಅಗತ್ಯ.ಶ್ಯಾಮಲಾ ಪಾಟೀಲ ಅಥ್ಲೆಟಿಕ್ಸ್ ಕೋಚ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
8ನೇ ತರಗತಿಯಿಂದ ಶ್ಯಾಮಲಾ ಪಾಟೀಲ ಅವರ ಬಳಿ ತರಬೇತಿ ಪಡೆದಿದ್ದೇನೆ. ಈಗ ಕಾಲೇಜಿನಲ್ಲೂ ಉತ್ತಮ ಪ್ರೋತ್ಸಾಹವಿದೆ. ಒಲಿಂಪಿಕ್ಸ್ ಸೇರಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕು ಎಂಬುದು ನನ್ನಗುರಿ ಶಿಲ್ಪಾ ಅಥ್ಲೀಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.