ADVERTISEMENT

ರೈಲಿನಿಂದ ನೈಜ ಭಾರತ ದರ್ಶನ

ಉತ್ತರ ಕರ್ನಾಟಕದ ಮೊದಲ ರೈಲ್ವೆ ವಸ್ತು ಸಂಗ್ರಹಾಲಯ ಲೋಕಾರ್ಪಣೆ: ಗೋಯಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:24 IST
Last Updated 9 ಆಗಸ್ಟ್ 2020, 16:24 IST
ಹುಬ್ಬಳ್ಳಿಯಲ್ಲಿ ಭಾನುವಾರ ಉದ್ಘಾಟನೆಗೊಂಡ ರೈಲ್ವೆ ವಸ್ತು ಸಂಗ್ರಹಾಲಯದ ರೈಲಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಪ್ರಯಾಣಿಸಿದರು
ಹುಬ್ಬಳ್ಳಿಯಲ್ಲಿ ಭಾನುವಾರ ಉದ್ಘಾಟನೆಗೊಂಡ ರೈಲ್ವೆ ವಸ್ತು ಸಂಗ್ರಹಾಲಯದ ರೈಲಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಪ್ರಯಾಣಿಸಿದರು   

ಹುಬ್ಬಳ್ಳಿ: ಭಾರತೀಯರ ಪಾಲಿಗೆ ರೈಲು ಎಂದರೆ ಪ್ರಯಾಣವಷ್ಟೇ ಅಲ್ಲ; ಅದು ಮನುಷ್ಯನ ಬದುಕಿನ ಜೊತೆ ಭಾವನಾತ್ಮಕ ನಂಟು ಹೊಂದಿದೆ. ಆದ್ದರಿಂದಲೇ ನೈಜ ಭಾರತವನ್ನು ಅರಿಯಲು ರೈಲಿನಲ್ಲಿ ಪ್ರಯಾಣಿಸಬೇಕೆಂದು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದರು ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

ನಗರದಲ್ಲಿ ನಿರ್ಮಿಸಿರುವ ಕರ್ನಾಟಕದ ಎರಡನೇ ಪಾರಂಪರಿಕ ರೈಲ್ವೆ ವಸ್ತು ಸಂಗ್ರಹಾಲಯವನ್ನು ನವದೆಹಲಿಯಿಂದ ವೆಬಿನಾರ್ ಮೂಲಕ ಭಾನುವಾರ ಉದ್ಘಾಟಿಸಿದ ಅವರು ‘ರೈಲು ಪ್ರಯಾಣ ವಿದ್ಯಾರ್ಥಿ ಜೀವನ, ಉದ್ಯೋಗ, ಕೌಟುಂಬಿಕ, ಪ್ರವಾಸ, ಹೋರಾಟ ಹೀಗೆ ಅನೇಕ ಜೀವನದ ಘಟನೆಗಳಲ್ಲಿ ಹಾದು ಹೋಗಿದೆ ದೇಶದ ಅಭಿವೃದ್ಧಿಗೆ ಇಲಾಖೆಯು ಎಂಜಿನ್‌ ಆಗಿದೆ’ ಎಂದು ಬಣ್ಣಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ‘ನನ್ನ ತಂದೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಆದ್ದರಿಂದ ರೈಲಿನ ಜೊತೆಗೆ ಅವಿನಾಭಾವ ಬಾಂಧವ್ಯವಿದೆ. ಲಾಕ್‌ಡೌನ್‌ ಅವಧಿಯಲ್ಲಿ ನೈರುತ್ಯ ರೈಲ್ವೆಯು 17 ರಾಜ್ಯಗಳಿಗೆ 229 ಶ್ರಮಿಕ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಿದೆ’ ಎಂದರು. ಇದೇ ವೇಳೆ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯ ಆರಂಭವಾಗಲು ನೆರವಾದ ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅನಂತ ಕುಮಾರ ಅವರನ್ನು ನೆನಪಿಸಿಕೊಂಡರು.

ADVERTISEMENT

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ ‘ವಸ್ತು ಸಂಗ್ರಹಾಲಯದಿಂದ ರೈಲ್ವೆ ಇಲಾಖೆ ಬೆಳೆದು ಬಂದ ರೀತಿಯ ಸಮಗ್ರ ಪರಿಚಯವಾಗುತ್ತದೆ. ಇದು ಧಾರವಾಡ ಜಿಲ್ಲೆಯ ಜನರಿಗೆ ದೊಡ್ಡ ಕೊಡುಗೆಯಾಗಿದೆ. ವಾಜಪೇಯಿ ಅವರು ಷಟ್ಪಥ ರಸ್ತೆಗಳನ್ನು ನಿರ್ಮಿಸಿ ಮಾದರಿಯಾದಂತೆ, ಮೋದಿ ಅವರು ರೈಲ್ವೆ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ’ ಎಂದರು.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್‌ ‘ಭಾರತದ ವಿವಿಧೆಡೆಯಿಂದ ವಸ್ತುಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಇದು ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ’ ಎಂದರು.

ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಪ್ರಧಾನ ಮುಖ್ಯ ಯಾಂತ್ರಿಕ ಎಂಜಿನಿಯರ್‌ ಪಿ. ರವಿಕುಮಾರ್, ಪ್ರಧಾನ ಮುಖ್ಯ ಹಣಕಾಸು ಸಲಹೆಗಾರರು ರೂಪಾ ಶ್ರೀನಿವಾಸನ್‌, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಆದಪ್ಪಗೌಡರ, ಬಾಬುಲಾಲ್‌ ಜೈನ್‌, ಶಾಸಕ ಪ್ರಸಾದ ಅಬ್ಬಯ್ಯ ಇದ್ದರು. ವೆಬಿನಾರ್‌ ಕಾರ್ಯಕ್ರಮದ ಬಳಿಕ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.