ADVERTISEMENT

ಹುಬ್ಬಳ್ಳಿ | ಎಸ್‌ಐ ಈಗ ವಾಣಿಜ್ಯ ತೆರಿಗೆ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 10:28 IST
Last Updated 26 ಡಿಸೆಂಬರ್ 2019, 10:28 IST
ಮಂಜುನಾಥ ಬೆಣಗಿ
ಮಂಜುನಾಥ ಬೆಣಗಿ   

ಹುಬ್ಬಳ್ಳಿ: ಬಡತನದಲ್ಲಿ ಬೆಳೆದರೂ ಸಾಧಿಸಬೇಕು ಎನ್ನುವ ಛಲದಿಂದಾಗಿ ಧಾರವಾಡದ ಆಂತರಿಕ ಭದ್ರತಾ ವಿಭಾಗದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಮಂಜುನಾಥ ಬೆಣಗಿ ಅವರು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿ, ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

‘ಕೆಎಎಸ್‌ ಮಾಡಬೇಕು ಎನ್ನುವುದು ಒಂದು ‘ಫ್ಯಾಶನ್‌’ ಆಗಿಸಿಕೊಳ್ಳಬೇಕು. ಆಗ ನೀವು ಯಾವುದೇ ಹುದ್ದೆಯಲ್ಲಿರಿ, ಬೀಡಿ. ಅದನ್ನು ಮುಟ್ಟುವವರೆಗೂ ಸುಮ್ಮನೆ ಕುಳಿತುಕೊಳ್ಳಲಾಗುವುದಿಲ್ಲ. ಅದರ ಫಲವೇ ಇಂದು ಕೆಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದೇನೆ’ ಎಂದರು ಅವರು.

‘ತಂದೆ ಧರ್ಮರಾಜ ಲಿಡ್ಕರ್‌ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದರು. ಆದರೆ, ಮಕ್ಕಳು ಓದಬೇಕು ಎಂಬ ಆಸೆ ಹೊಂದಿದ್ದರು. ಅದಕ್ಕಾಗಿ ಶ್ರಮಿಸುತ್ತಿದ್ದರು. ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿದ್ದೇನೆ. ಕೆಸಿಡಿ ಕಾಲೇಜಿನಲ್ಲಿ ಪದವಿ ಮಾಡಿದ್ದೇನೆ’ ಎಂದು ಹೇಳಿದರು.

ADVERTISEMENT

‘ಕೆಪಿಎಸ್‌ಸಿ ಪರೀಕ್ಷೆಯನ್ನು ಮೂರನೇ ಬಾರಿಗೆ ಬರೆದಿದ್ದೇನೆ. 2015ರಲ್ಲಿ ಮೇನ್ಸ್ ಪಾಸಾಗಿದ್ದೆ. ಆದರೆ, ಸಂದರ್ಶನದಲ್ಲಿ ಕಡಿಮೆ ಅಂಕ ಬಂದಿದ್ದವು. ಈ ಬಾರಿ ಯಶಸ್ಸು ಸಾಧಿಸಿದ್ದೇನೆ. ಪೊಲೀಸ್‌ ಹುದ್ದೆಯಲ್ಲಿ ಓದುವುದಕ್ಕೆ ಸಮಯ ಸಿಗುವುದಿಲ್ಲ. ಆದರೂ, ರಾತ್ರಿ, ಬೆಳಿಗ್ಗೆ ಯಾವಾಗ ಸಮಯ ಸಿಗುತ್ತದೆಯೋ ಆಗಲೇ ಓದಿಕೊಳ್ಳುತ್ತಿದ್ದೆ’ ಎಂದರು. ಇವರ ಪತ್ನಿ ಮಹಾದೇವಿ ಪಿ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.