ADVERTISEMENT

ಏಕೀಕರಣದ ಜೊತೆ ಶಿಕ್ಷಣಕ್ಕೂ ಹೋರಾಟ

ಅದರಗುಂಚಿ ಶಂಕರಗೌಡರ ಸಾಧನೆ ಸ್ಮರಣೆ: ಬೆಳಗಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 10:17 IST
Last Updated 30 ನವೆಂಬರ್ 2019, 10:17 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಣ್ಯರು ಅದರಗುಂಚಿ ಶಂಕರಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಣ್ಯರು ಅದರಗುಂಚಿ ಶಂಕರಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಹುಬ್ಬಳ್ಳಿ: ಅದರಗುಂಚಿಯ ಶಂಕರಗೌಡರು ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳ ಜೊತೆಗೆ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೂ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಕನ್ನಡ ಚುಟುಕು ಸಾಹಿತ್ಯ ಪರಿಷತ್‌ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್‌.ವಿ. ಬೆಳಗಲಿ ಹೇಳಿದರು.

ಮೂರು ಸಾವಿರ ಮಠದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹಮ್ಮಿಕೊಂಡಿದ್ದ ಅದರಗುಂಚಿ ಶಂಕರಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ‘ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿದ್ದ ಶಂಕರಗೌಡರು ಅದರಗುಂಚಿ ಹಾಗೂ ನೂಲ್ವಿಯಲ್ಲಿ ಶಾಲೆಗಳನ್ನು ಆರಂಭಿಸಿದರು. ಅವರ ನಿರಂತರ ಹೋರಾಟದ ಫಲವನ್ನು ನಾವೀಗ ಅನುಭವಿಸುತ್ತಿದ್ದೇವೆ’ ಎಂದರು.

‘ಶಂಕರಗೌಡರು ಅದರಗುಂಚಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ 23 ದಿನಗಳ ಕಾಲ ಮಾಡಿದ್ದ ಆಮರಣ ಉಪವಾಸ ಸತ್ಯಾಗ್ರಹ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದರ ಬಿಸಿ ಪ್ರಧಾನಿಗೂ ತಟ್ಟಿತ್ತು. ಬಳಿಕ ಏಕೀಕರಣ ಹೋರಾಟ ಚುರುಕು ಪಡೆದುಕೊಂಡಿತು’ ಎಂದರು.

ADVERTISEMENT

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಮಾತನಾಡಿ ‘ಕರ್ನಾಟಕ ಏಕೀಕರಣಕ್ಕಾಗಿ ಶಂಕರಗೌಡರು ಮಾಡಿದ ಹೋರಾಟ ಅನನ್ಯ. ಹೋರಾಟದ ಬಗ್ಗೆ ಜನಜಾಗೃತಿ ಇಲ್ಲದ ಕಾಲದಲ್ಲಿಯೇ ಅವರು ಅನೇಕ ಹೋರಾಟಗಳನ್ನು ಮಾಡಿದ್ದರು’ ಎಂದರು.

‘ಬ್ರಿಟಿಷರು ತಮ್ಮ ವಿರುದ್ಧ ಮಾತನಾಡಿದವರನ್ನು ಜೈಲಿಗೆ ಕಳುಹಿಸುತ್ತಿದ್ದರು. ಆಗಿನ ನಿಯಮವನ್ನು ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಮುಂದುವರಿಸಿಕೊಂಡು ಬಂದವು. ಸರ್ಕಾರದ ವಿರುದ್ಧ ಮಾತನಾಡುವುದನ್ನು ಯಾವ ಪಕ್ಷಗಳೂ ಸಹಿಸುವುದಿಲ್ಲ’ ಎಂದರು.

ದತ್ತಿಯ ದಾನಿ ಶಿವಲಿಂಗಮ್ಮ ಶಂಕರಗೌಡ ಬಾಳನಗೌಡ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮು ಮೂಲಗಿ ಹಾಡಿನ ಮೂಲಕ ಶಂಕರಗೌಡರ ಪರಿಚಯ ಮಾಡಿಕೊಟ್ಟರು. ಬಳಿಕ ಮಾತನಾಡಿ ‘ಮೊದಲು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಾತ್ರ ಶಂಕರಗೌಡರ ದತ್ತಿ ಉಪನ್ಯಾಸ ಹಮ್ಮಿಕೊಳ್ಳುತ್ತಿದ್ದೆವು. ಈ ವರ್ಷದಿಂದ ಜಿಲ್ಲೆಯ ಬೇರೆ ಬೇರೆ ಕಡೆ ಪ್ರತಿ ವರ್ಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದರು.

ರಾಮು ಮೂಲಗಿ ಅವರು ರಾಷ್ಟ್ರೀಯ ಪ್ರಶಸ್ತಿಯ ಜೊತೆ ತಮಗೆ ಬಂದ ₹ 51 ಸಾವಿರ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಅದರ ಬಡ್ಡಿ ಹಣದಲ್ಲಿ ಪ್ರತಿ ವರ್ಷ ಈ ದತ್ತಿ ಉಪನ್ಯಾಸ ನಡೆಸುತ್ತಿದ್ದಾರೆ.

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಾಟೀಲ ಪುಟ್ಟಪ್ಪ, ಮಾಜಿ ಸಚಿವ ಪಿ.ಸಿ. ಸಿದ್ಧನಗೌಡರ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಜಿ. ಪಾಟೀಲ, ಮೂರುಸಾವಿರ ಮಠದ ಕಾರ್ಯದರ್ಶಿ ಹನುಮಂತ ಎಸ್‌. ಶಿಗ್ಗಾಂವ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಸ್‌.ಎಸ್‌. ಪಾಟೀಲ, ಮಠದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎಂ. ಸಾಲಿಮಠ, ವಿ.ಜಿ. ಪಾಟೀಲ, ಎಸ್‌.ಎಸ್‌. ಪಾಟೀಲ, ಶಿವಣ್ಣ ಬೆಲ್ಲದ, ಸದಾನಂದ ಶಿವಳ್ಳಿ, ಶಾಂತೇಶ ಬಿ. ಗಾಮನಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.