ADVERTISEMENT

ಮನುಷ್ಯತ್ವ ಉಳ್ಳವರಿಗೆ ಬೆಲೆಯಿಲ್ಲ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 11:12 IST
Last Updated 27 ಜನವರಿ 2020, 11:12 IST
ಲಯನ್ಸ್‌ ಕ್ಲಬ್‌ ಪರಿವಾರದ ವತಿಯಿಂದ ಶಿಕ್ಷಕನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಇದ್ದಾರೆ
ಲಯನ್ಸ್‌ ಕ್ಲಬ್‌ ಪರಿವಾರದ ವತಿಯಿಂದ ಶಿಕ್ಷಕನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಇದ್ದಾರೆ   

ಹುಬ್ಬಳ್ಳಿ: ಇಂದಿನ ದಿನಗಳಲ್ಲಿ ಮನುಷ್ಯತ್ವ ಇಲ್ಲದವರು ಮುಂದೆ ಬರುತ್ತಾರೆಯೇ ಹೊರತು, ಮನುಷ್ಯತ್ವ ಉಳ್ಳವರಿಗೆ ಬೆಲೆಯಿಲ್ಲದಂತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ವಿಷಾದ ವ್ಯಕ್ತಪಡಿಸಿದರು.

ನಗರದ ಬಿವಿಬಿ ಕಾಲೇಜಿನಲ್ಲಿ ಸೋಮವಾರ ಲಯನ್ಸ್‌ ಕ್ಲಬ್‌ ಹುಬ್ಬಳ್ಳಿ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ–2020 ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಸಮಾಜದಲ್ಲಿ ಸಂಸ್ಕಾರ, ಉತ್ತಮ ನಡತೆ, ಕಲಿಕೆಗಳು ಕುಟುಂಬದಿಂದ ಬಳುವಳಿಯಾಗಿ ಬರುತ್ತಿತ್ತು. ಆದರೆ, ಇಂದಿನ ಸಮಾಜದಲ್ಲಿ ಒಳಿತಿನ ಬದಲು ಕೆಟ್ಟದ್ದೇ ಹೆಚ್ಚಾಗಿ ದೊರೆಯುತ್ತಿದೆ. ಸಂಸ್ಕಾರ ಎನ್ನುವುದು ಮರಿಚಿಕೆಯಾಗುತ್ತಿದೆ. ಅಂದು ಸಿಗುವ ಸಂಸ್ಕಾರ ಇಂದು ದೊರೆಯುತ್ತಿಲ್ಲ. ವಿದ್ಯಾರ್ಥಿಗಳು ಶಿಕ್ಷಕರಿಗೇ ಬೈಯ್ಯುವಂತ ವಾತಾವರಣ ನಿರ್ಮಾಣವಾಗಿದೆ ಎಂದರು.

ADVERTISEMENT

ಸೂರ್ಯ, ಚಂದ್ರರು ಬದಲಾಗಿಲ್ಲ. ಪ್ರಕೃತಿಯಲ್ಲಿ ಬದಲಾಗಿದ್ದು ಮನುಷ್ಯ ಮತ್ತು ಮನುಷ್ಯತ್ವ ಮಾತ್ರ. ಮನುಷ್ಯರ ರುಂಡವನ್ನೇ ಕಡೆದು ಬದುಕುತ್ತಾರೆ. ದೇವರ ವಿಗ್ರಹ ಹಾಗೂ ಕಾಣಿಗೆ ಡಬ್ಬಿಗಳನ್ನು ಕಳವು ಮಾಡಿ ಬದುಕುತ್ತಾರೆ. ಇವುಗಳ ನಡುವೆಯೇ ಒಳ್ಳೆಯ ಗುಣಗಳು ಸಹ ಮೆರೆದಾಡುತ್ತವೆ ಎಂದು ತಿಳಿಸಿದರು.

ಪ್ರತಿಭೆ ಇದ್ದು, ಉತ್ತಮ ಗುಣವಿದ್ದರೂ ಸೂಕ್ತ ವೇದಿಕೆಯಿಲ್ಲದೆ ಇದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಕೆಲವರಲ್ಲಿ ಪ್ರತಿಭೆಯೇ ಇರವುದಿಲ್ಲ. ಎತ್ತರಕ್ಕೆ ಬೆಳೆದು ಬಿಡುತ್ತಾರೆ. ಉಳ್ಳವರ ಕಾಲವಾಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇವುಗಳ ನಡುವೆ, ಲಯನ್ಸ್‌ ಪರಿವಾರಗಳಂತಹ ಸಂಸ್ಥೆಗಳು ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಸಾಮಾಜಿಕ ಜವಾಬ್ದಾರಿ ಹೊತ್ತಿರುವ ಸಂಘಟನೆಗಳು ಇಂತಹ ಕಾರ್ಯಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಪ್ರಶಸ್ತಿ ಸಣ್ಣದಿರಲಿ, ದೊಡ್ಡದಿರಲಿ ಅದು ಪಡೆದವರಿಗೆ ಮಾನಸಿಕ ನೆಮ್ಮದಿ ಹಾಗೂ ಉತ್ಸಾಹ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಅದನ್ನು ಹೊರಹಾಕಲು ಪ್ರಯತ್ನಿಸುತ್ತಾರೆ. ಆ ಪ್ರತಿಭೆಗೆ ಸೂಕ್ತ ಗೌರವ ದೊರೆತಾಗ, ಅವರಲ್ಲಿ ಸಾರ್ಥಕತೆ ಒಡಮೂಡುತ್ತದೆ ಎಂದರು.

ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡಬೇಕು. ಶಿಕ್ಷಕರು ಶಿಕ್ಷಕ ವೃತ್ತಿ ಮಾಡಿದರೆ, ಸಮಾಜ ಬದಲಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರತಿಯೊಂದು ಮಗುವು ಸಹ ಶಾಲೆಗೆ ಬೆಳಕಾಗುವ ಕೆಲಸ ಮಾಡಬೇಕು. ಇಲ್ಲಿ ಯಾರೂ ಶಾಶ್ವತವಲ್ಲ. ಹುಟ್ಟು ಸಾವಿನ ಮಧ್ಯೆ ಏನು ಮಾಡುತ್ತೇವೆ ಎನ್ನುವುದಷ್ಟೇ ಮುಖ್ಯ ಎಂದರು.

ಹುಬ್ಬಳ್ಳಿ ತಾಲ್ಲೂಕಿನ ಅತ್ಯುತ್ತಮ 14 ಶಾಲೆಗಳ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಲಯನ್ಸ್‌ ಕ್ಲಬ್‌ ಪರಿವಾರದ ಅಧ್ಯಕ್ಷ ಶಶಿ ಸಾಲಿ, ಮಹೇಂದ್ರ ಸಿಂಘಿ, ಡಾ. ಸಂಜಯ ಗಣೇಶಕರ, ಶ್ರೇಣಿಕ್‌ರಾಜ್‌ ರಾಜಮಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.