ADVERTISEMENT

ಜೋಶಿ ಮುಖ್ಯಮಂತ್ರಿಯಾದರೆ ತಪ್ಪಿಲ್ಲ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 13:06 IST
Last Updated 10 ಫೆಬ್ರುವರಿ 2023, 13:06 IST

ಹುಬ್ಬಳ್ಳಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಬಹುದು. ಬ್ರಾಹ್ಮಣ ಸಮಾಜದವರು ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪಿಲ್ಲ. ಆದರೆ, ಎಚ್‌.ಡಿ. ಕುಮಾರಸ್ವಾಮಿ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡತ್ತಿದ್ದಾರೆ’ ಎಂದು ಸಾರಿಗೆ ಸಚಿವ ಶ್ರೀರಾಮಲು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೇಶ್ವೆಯವರ ಡಿಎನ್ಎ ಮನೆಯತನದವರು ಎನ್ನುವ ಎಚ್ಡಿಕೆ ಹೇಳಿಕೆ ಅಕ್ಷಮ್ಯ. ಚುನಾವಣೆ ಸಮೀಸುತ್ತಿರುವುದರಿಂದ ಹಾಗೂ ರಾಜಕೀಯ ಉದ್ದೇಶಕ್ಕೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಅಲ್ಲದೆ, ಜೋಶಿ ಮುಖ್ಯಮಂತ್ರಿಯಾಗಲು ಯೋಗ್ಯ ನಾಯಕ. ಆದರೆ, ಆ ಕುರಿತು ಪಕ್ಷದಲ್ಲಿ ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ’ ಎಂದರು.

‘ಪ್ರಲ್ಹಾದ ಜೋಶಿ ಎಲ್ಲ ಧರ್ಮ ಮತ್ತು ಜಾತಿಗೆ ಸೇರಿದ ನಾಯಕ. ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ದೊರಕಿಸಿಕೊಡುವಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟವರು. ಜಾತಿಯಾಧಾರಿತವಾಗಿ ಅವರನ್ನು ಗುರುತಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸಮ್ಮಿಶ್ರ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದಾಗ, ನಾನು‌ ಸಚಿವನಾಗಿದ್ದೆ. ಆ ಸಂದರ್ಭ ಕುಮಾರಸ್ವಾಮಿ ಯಾರ‍್ಯಾರನ್ನು, ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ’ ಎಂದು ಕಿಡಿಕಾರಿದರು.

‘ಪ್ರಾದೇಶಿಕ ಪಕ್ಷ ಕಟ್ಟಿರುವ ಜನಾರ್ಧನ ರೆಡ್ಡಿ ಅವರ ಮನವೊಲಿಸುವ ಕಾರ್ಯ ಮಾಡುತ್ತಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ, ಪಕ್ಷದ ಸಿದ್ಧಾಂತದ ಅಡಿಯಲ್ಲಿ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳುವ ಕೆಲಸ ಮಾಡುತ್ತೇವೆ. ನಾನು ಬಳ್ಳಾರಿ ವಿಧಾನ ಸಭಾ ಕ್ಷೇತ್ರದಿಂದಲೇ ಜಿಲ್ಲೆಯಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ತಿಳಿಸಿದರು.

ತನಿಖೆಗೆ ಆದೇಶ: ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ತರಬೇತಿ ಪಡೆಯುತ್ತಿದ್ದವರಿಂದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ, ತರಬೇತಿ ಸ್ಥಗಿತಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ನಿಯಮಾವಳಿ ಪೂರಕವಾಗಿ ತರಬೇತಿ ನೀಡಲಾಗುತ್ತಿದೆ’ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.