
ತಡಸ: ಸುಲಿಗೆ ಮಾಡಿರುವ ಆರೋಪದ ಮೇಲೆ ತಡಸ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಶ್ರೀನಿವಾಸ ತಿರುಪತಿ ವೀರಾಪುರ(26), ವಿವೇಕ ಚಂದ್ರಶೇಖರ ಬಳ್ಳಾರಿ(24), ನೀಲಕಂಠ ಪರಶುರಾಮ ಗುಡಿಹಾಳ(35 ) ಬಂಧಿತ ಆರೋಪಿಗಳು. ಬಂಧಿತರಿಂದ ಸುಲಿಗೆ ಮಾಡಿದ್ದ ಮೂರು ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಮತ್ತು ಒಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣವೇನು: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಮುತ್ತಪ್ಪ, ಲಾರಿಯೊಂದರ ಕ್ಲೀನರ್ ಆಗಿದ್ದು, ಮೇ 20ರಂದು ಬೆಳಗಿನ ಜಾವ 2 ಗಂಟೆಯಲ್ಲಿ, ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೋಗುವ, ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ, ಅಂಬುಜಾ ಫ್ಯಾಕ್ಟರಿ ಹತ್ತಿರ, ಲಾರಿಯನ್ನು ನಿಲ್ಲಿಸಿ ಶೌಚಕ್ಕೆ ಹೋಗಿದ್ದರು. ಆ ಸಮಯದಲ್ಲಿ ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು, ಚಾಕು ತೋರಿಸಿ ಬೆದರಿಸಿ ಮೊಬೈಲ್‌ನ್ನು ಕಿತ್ತುಕೊಂಡು ಹೋಗಿದ್ದರು.
ಅದೇ ದಿನ ಅದೇ ರಸ್ತೆಯಲ್ಲಿ ರಾತ್ರಿ 3 ಗಂಟೆಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಪದವಿ ಕಾಲೇಜಿನ ಪ್ರಾಂಶುಪಾಲರು ಕುಟುಂಬ ಸಮೇತರಾಗಿ ರಾಣಿಬೆನ್ನೂರಿಗೆ ಹೋಗುತ್ತಿದ್ದವರು ಆಗರವಾಲ್ ವೇರ್‌ಹೌಸ್ ಹತ್ತಿರ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದ್ದಾರೆ. ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು, ಚಾಕು ತೋರಿಸಿ, ಬೆದರಿಸಿ, ಎರಡು ಮೊಬೈಲ್‌ಗಳು ಮತ್ತು ಕರಿಮಣಿ ತಾಳಿಯನ್ನು ಕಿತ್ತುಕೊಂಡು ಹೋಗಿದ್ದರು.
ಈ ಬಗ್ಗೆ ತಡಸ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿನ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಆ ತಂಡ ಮೇ 23ರಂದು ಬೆಳಗಿನ ಜಾವ 4 ಗಂಟೆಯಲ್ಲಿ, ಹುಬ್ಬಳ್ಳಿ–ಗಬ್ಬೂರ ಬೈಪಾಸ್ ಹತ್ತಿರ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.