ADVERTISEMENT

ಯುವಜನರು ನಿದ್ದೆ ಮಾಡದಂತಹ ಕನಸುಗಳನ್ನು ಕಾಣಬೇಕು: ಡಾ. ಶಿವಪ್ರಸಾದ್

‘ಅತುಲ್ಯ ಭಾರತ’ ಯುವ ಸಮಾವೇಶದಲ್ಲಿ ಡಾ. ಶಿವಪ್ರಸಾದ ಎಸ್.ಎಂ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 10:24 IST
Last Updated 25 ಜನವರಿ 2020, 10:24 IST
ಸಮಾವೇಶದಲ್ಲಿ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಈಶ್ವರ ಭಟ್ ಮಾತನಾಡಿದರು
ಸಮಾವೇಶದಲ್ಲಿ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಈಶ್ವರ ಭಟ್ ಮಾತನಾಡಿದರು   

ಹುಬ್ಬಳ್ಳಿ: ‘ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಬದಲಾವಣೆಗೆ ಇದು ಸಕಾಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದಂತೆ, ಯುವಜನರು ನಿದ್ದೆ ಮಾಡಲು ಬಿಡದಂತಹ ದೊಡ್ಡ ಕನಸುಗಳನ್ನು ಕಾಣಬೇಕಾಗಿದೆ’ ಎಂದು ಉನ್ನತ ಶಿಕ್ಷಣ ಅಕಾಡೆಯ ನಿರ್ದೇಶಕ ಡಾ. ಶಿವಪ್ರಸಾದ್ ಎಸ್‌.ಎಂ. ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಅತ್ಯುಲ್ಯ ಭಾರತ’ ಯುವ ಸಮಾವೇಶದಲ್ಲಿ ಅವರು ಮಾತನಾಡಿರು.

‘ನಾಗರಿಕತೆ ಆರಂಭವಾದಾಗಿನಿಂದ ಇಲ್ಲಿಯವರೆಗಿನ ಪ್ರತಿ ಬದಲಾವಣೆಯ ಹಿಂದೆಯೂ ತಂತ್ರಜ್ಞಾನವಿದೆ. ಆರ್ಥಿಕತೆ ಹಾಗೂ ತಂತ್ರಜ್ಞಾನ ಇಡೀ ಪ್ರಪಂಚವನ್ನು ನಿಯಂತ್ರಿಸುತ್ತಿವೆ. ಇವೆರಡರಲ್ಲೂ ಪಾರಮ್ಯ ಸಾಧಿಸಿರುವ ದೇಶಗಳೇ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಾಗಿವೆ. ಈ ವಿಷಯದಲ್ಲಿ ಭಾರತ ಎಲ್ಲಿದೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಂಡು ಕಾರ್ಯೋನ್ಮುಖರಾಗಬೇಕಿದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ನ್ಯಾನೊ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಭಾರೀ ಸಂಶೋಧನೆಗಳಾಗುತ್ತಿವೆ. ಮುಂದಿನ 20 ವರ್ಷದಲ್ಲಿ ಇವೆರಡೂ ತಂತ್ರಜ್ಞಾನಗಳು ವಿಶ್ವವನ್ನೇ ಆಳಲಿವೆ. ತಂತ್ರಜ್ಞಾನದ ಈ ನಾಗಾಲೋಟದ ಓಟಕ್ಕೆ ನಾವೆಲ್ಲರೂ ಅಣಿಯಾಗಬೇಕಿದೆ. ಇಲ್ಲದಿದ್ದರೆ, ಉಳಿಗಾಲವಿರುವುದಿಲ್ಲ. ಅದಕ್ಕಾಗಿ, ನಾನು ಬುದ್ಧಿವಂತನಲ್ಲ ಎಂಬ ಹಿಂಜರಿಕೆಯನ್ನು ಬಿಡಬೇಕು. ಜ್ಞಾನ, ಪರಿಶ್ರಮ ಹಾಗೂ ಆವಿಷ್ಕಾರದ ಸೂತ್ರವನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕು’ ಎಂದು ಕರೆ ನೀಡಿದರು.

ಉದ್ಯಮಿ ಜಗದೀಶ ಹಿರೇಮಠ, ‘ಪ್ರಪಂಚದಲ್ಲೇ ಹೆಚ್ಚು ಯುವಜನರನ್ನು ಹೊಂದಿರುವ ನಮ್ಮ ಬಳಿ ಬುದ್ಧಿವಂತಿಕೆ ಇದೆ. ಆದರೆ, ಅದನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ನಮ್ಮಲ್ಲಿ ಎಲ್ಲಾ ರೀತಿಯ ಸಂಪತ್ತು ಇದ್ದರೂ, ಭಾರತ ಇಂದಿಗೂ ಆಮದನ್ನೇ ನೆಚ್ಚಿಕೊಂಡಿದೆ. ಪ್ರತಿ ತಂತ್ರಜ್ಞಾನದ ಮೂಲವೂ ಬೇರೆ ದೇಶವೇ ಆಗಿದೆ. ಅವರ ಆಣತಿಯಂತೆ, ಭಾರತದಲ್ಲಿ ಉತ್ಪಾದನೆ ನಡೆಯುತ್ತಿದೆ. ಆ ದೇಶಗಳ ಸ್ಥಾನವನ್ನು ನಾವು ತಲುಪಿದರೆ, ಕೆಲವೇ ವರ್ಷಗಳಲ್ಲಿ ಭಾರತ ಸೂಪರ್ ಪವರ್ ಆಗುವುದರಲ್ಲಿ ಎರಡು ಮಾತಿಲ್ಲ’ ಎಂದು ಹೇಳಿದರು.

ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ. ಈಶ್ವರ್‌ ಭಟ್, ನ್ಯೂ ಇಂಡಿಯಾ ಜಂಕ್ಷನ್‌ನ ಪ್ರಿಯಾಂಕ ಡಿಯೊ ಹಾಗೂ ಜೈನ್ ಕಾಲೇಜಿನ ಡೀನ್ ಡಾ. ಸಂದೀಪ್ ನಾಯರ್ ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಪ್ರಜ್ಞಾ ಪ್ರವಾಹದ ಸಂಚಾಲಕ ರಘುನಂದನ್ ಭಾಗವಹಿಸಿದ್ದರು. ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡ, ಹುಬ್ಬಳ್ಳಿ ಘಟಕದ ಅಧ್ಯಕ್ಷ ವಿಜಯಕುಮಾರ ಭಜಂತ್ರಿ, ಕಾರ್ಯದರ್ಶಿ ಅರುಣ್ ಶಾಮನೂರ ಹಾಗೂ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.