ADVERTISEMENT

ತಿರಂಗ ಜಾಥಾ; ಸಂಭ್ರಮಿಸಿದ ವಿದ್ಯಾರ್ಥಿಗಳು

ಸ್ವಾತಂತ್ರ್ಯದ ಹಬ್ಬಕ್ಕೆ ಅಣಿಯಾದ ಹುಬ್ಬಳ್ಳಿ; ಮಕ್ಕಳ ಜೊತೆ ಹೆಜ್ಜೆಹಾಕಿ ಕುಣಿದ ಸಚಿವ ಜೋಶಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:12 IST
Last Updated 13 ಆಗಸ್ಟ್ 2022, 16:12 IST
ಮನೆಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಅಂಗವಾಗಿ ಹುಬ್ಬಳ್ಳಿ ಕೇಶವಕುಂಜದಲ್ಲಿ ಶನಿವಾರ ಆರ್‌ಎಸ್‌ಎಸ್‌ ಪ್ರಮುಖರು ಧ್ವಜಾರೋಹಣ ನೆರವೇರಿಸಿದರು
ಮನೆಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಅಂಗವಾಗಿ ಹುಬ್ಬಳ್ಳಿ ಕೇಶವಕುಂಜದಲ್ಲಿ ಶನಿವಾರ ಆರ್‌ಎಸ್‌ಎಸ್‌ ಪ್ರಮುಖರು ಧ್ವಜಾರೋಹಣ ನೆರವೇರಿಸಿದರು   

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಬ್ಬವಾಗಿ ಮಾರ್ಪಟ್ಟಿದೆ. ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಅಂಗವಾಗಿ ಮನೆ-ಮನೆಗಳಲ್ಲಿ, ಬೀದಿ-ಬೀದಿಗಳಲ್ಲಿ, ಅಂಗಡಿ-ಮುಗ್ಗಟ್ಟುಗಳಲ್ಲಿ ತ್ರಿವರ್ಣ ಧ್ವಜ ಪಟಪಟನೆ ಹಾರಾಡುತ್ತಿದೆ. ನಗರದ ಪ್ರಮುಖ ಸ್ಥಳಗಳು ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿದೆ.

ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮೂರುಸಾವಿರ ಮಠದಿಂದ 75 ಮೀಟರ್‌ ಉದ್ದದ ತಿರಂಗ ಹಿಡಿದು ರ‍್ಯಾಲಿ ನಡೆಸಿದರು. ದುರ್ಗದಬೈಲ್, ಕೊಪ್ಪಿಕರ್‌ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮುಖಾಂತರ ಸಾಗಿದ ರ‍್ಯಾಲಿ, ಚನ್ನಮ್ಮ ವೃತ್ತದಲ್ಲಿ ಅಂತ್ಯಗೊಂಡಿತು. ವಿದ್ಯಾರ್ಥಿಗಳು ತಿರಂಗವನ್ನು ಹಿಡಿದು ಚನ್ನಮ್ಮ ವೃತ್ತವನ್ನು ಸುತ್ತುವರಿದು ಸಂಭ್ರಮಿಸಿದರು. ಈ ವೇಳೆ ‘ಭಾರತ ಮಾತಾಕಿ ಜೈ’ ಘೋಷ ವಾಕ್ಯ ಮುಗಿಲು ಮುಟ್ಟಿತ್ತು.

ಹುಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಗಬ್ಬೂರು ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಹಮ್ಮಿಕೊಂಡಿದ್ದ ಬೈಕ್‌ ರ‍್ಯಾಲಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿ, ತಾವೇ ಸ್ವತಃ ಸ್ಕೂಟಿ ಚಲಾಯಿಸಿಕೊಂಡು ಚನ್ನಮ್ಮ ವೃತ್ತದವರೆಗೆ ಬಂದರು. ಅಷ್ಟರಲ್ಲಾಗಲೇ ಚಿನ್ಮಯ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು 150 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಹಿಡಿದು ಕಾಲ್ನಡಿಗೆ ಜಾಥಾದ ಮೂಲಕ ಚನ್ನಮ್ಮ ವೃತ್ತದ ಕಡೆಗೆ ಬರುತ್ತಿದ್ದರು. ವಿದ್ಯಾರ್ಥಿಗಳ ಜಾಥಾ ಗಮನಿಸಿದ ಸಚಿವ ಜೋಶಿ, ಬೈಕ್‌ ರ್‍ಯಾಲಿ ಮೊಟಕುಗೊಳಿಸಿ ವಿದ್ಯಾರ್ಥಿಗಳ ಜೊತೆ ಸೇರಿ, ಧ್ವಜದ ಅಡಿಯಲ್ಲಿ ‘ವಂದೇ ಮಾತರಂ, ಬೋಲೋ ಭಾರತ್ ಮಾತಾ ಕೀ’ ಘೋಷಣೆ ಕೂಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ADVERTISEMENT

ಅದೇ ವೇಳೆ ಹಮ್ ಭಾರತಿ ಫೌಂಡೇಷನ್ ಮತ್ತು ಸ್ವರನಾದ ಡೋಲ್ ಪಾಟಿ ತಂಡದವರು ಸಹ ಚನ್ನಮ್ಮ ವೃತ್ತದಲ್ಲಿ ಒಂದೆಡೆ ಸೇರಿ ಡೋಲು ಬಾರಿಸಿ ಸ್ವಾತಂತ್ರ್ಯದ ಹಬ್ಬಕ್ಕೆ ಕಳೆಕಟ್ಟುತ್ತಿದ್ದರು. ಡೋಲಿನ ಅಬ್ಬರದ ನಾದಕ್ಕೆ ಚಿನ್ಮಯ ಕಾಲೇಜಿನ ವಿದ್ಯಾರ್ಥಿಗಳು ಮನದುಂಬಿ ಕುಣಿದು ಕುಪ್ಪಳಿಸಿದರು. ಸಚಿವ ಜೋಶಿ ಮತ್ತೆ ವಿದ್ಯಾರ್ಥಿಗಳ ಜೊತೆ ಸೇರಿ ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗಿದರು, ವಿದ್ಯಾರ್ಥಿಗಳ ಜೊತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ವಿದ್ಯಾನಗರ ಶಿರೂರು ಪಾರ್ಕ್‌ನಿಂದ ಚೇತನಾ ಕಾಲೇಜು, ಐಬಿಎಂಆರ್‌, ಪಿಸಿ ಜಾಬಿನ್‌ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ಆರಂಭಿಸಿ ಕಿಮ್ಸ್‌ ಆಸ್ಪತ್ರೆ ಎದುರು ಮುಕ್ತಾಯಗೊಳಿಸಿದರು. ಕೆಲವು ವಿದ್ಯಾರ್ಥಿಗಳು ಭಾರತಾಂಬೆಯೆ ವೇಷಭೂಷಣ ಧರಿಸಿದ್ದು ಆಕರ್ಷಣೀಯವಾಗಿತ್ತು. ಶಾಸಕ ಜಗದೀಶ ಶೆಟ್ಟರ್‌, ಮಹೇಶ ಟೆಂಗಿನಕಾಯಿ, ರಾಜನ್ಣ ಕೊರವಿ ಇದ್ದರು.

ಅಲ್ಲಲ್ಲಿ ವಿವಿಧ ಕಾರ್ಯಕ್ರಮ: ಗೋಕುಲ ಪೊಲೀಸ್‌ ಠಾಣೆ ಸಿಬ್ಬಂದಿ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯಲ್ಲಿ ‘ತ್ರಿವರ್ಣ ಧ್ವಜ ಬೈಕ್‌ ರ‍್ಯಾಲಿ’ ನಡೆಸಿದರು. ಗಿರಣಿಚಾಳನ ನವಜೀವನ ಹರಿಜನ ಸೇವಾ ಸಂಘದ ಸದಸ್ಯರು ನವಜೀವನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ ಮತ್ತು ನೋಟ್ ಬುಕ್‌ ವಿತರಿಸಿ ಸ್ವಾತಂತ್ರ್ಯದ ಶುಭಾಶಯ ಹೇಳಿದರು. ಹಳೇಹುಬ್ಬಳ್ಳಿ ಸಿದ್ಧಾರೂಢಮಠದ ಬಳಿ ಇರುವ ಆರೂಢ ಅಂಗವಿಕಲರ ಶಿಕ್ಷಣ ಸಮಿತಿ ಶಾಲೆಯ ವಿದ್ಯಾರ್ಥಿಗಳಿಗೆ ಸೇ. ಮಿಲಾಗ್ರಿಸ್‌ ಕ್ರೆಡಿಟ್‌ ಸೌಹಾರ್ದ ಕೋ–ಆಪರೇಟಿವ್‌ ಸೊಸೈಟಿ ವತಿಯಿಂದ ಚಾದರ ಮತ್ತು ಸಿಹಿ ವಿತರಿಸಲಾಯಿತು. ಚನ್ನಮ್ಮ ವೃತ್ತದಲ್ಲಿ ಜೈನ ಮಹಿಳಾ ಮಂಡಳದ ಸದಸ್ಯರು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ 75ನೇ ಸ್ವಾತಂತ್ರ್ಯಕ್ಕೆ ಸ್ವಾಗತ ಕೋರುವ ಬೃಹತ್‌ ರಂಗೋಲಿ ಬಿಡಿಸಿ ಗಮನ ಸೆಳೆದರು.

‘ಭಾರತದ ರಕ್ಷಣೆ, ಏಳ್ಗೆಗೆ ಕಟಿಬದ್ಧರಾಗಿ’
ಹುಬ್ಬಳ್ಳಿ:
‘ಭಾರತೀಯ ಜೀವನ‌ ಶೈಲಿ ನಮ್ಮಲ್ಲಿ ಅಡಕವಾದಾಗ ಮಾತ್ರ ಹಿರಿಯರು ಹೇಳಿಕೊಟ್ಟ ಮೌಲ್ಯಗಳು ಉಳಿಯುತ್ತವೆ. ಭಾರತದ ರಕ್ಷಣೆ ಹಾಗೂ ಏಳ್ಗೆಗಾಗಿ ಪ್ರತಿಯೊಬ್ಬರೂ ಕಟಿಬದ್ಧರಾಗಿರಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.

ನಗರದ ಕೇಶವ ಕುಂಜದಲ್ಲಿ ಶನಿವಾರ ನಡೆದ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಅನೇಕರ ತ್ಯಾಗ–ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಭಾರತಾಂಬೆಯ ದಾಸ್ಯ ಮುಕ್ತಿಗೆ ಲಕ್ಷಾಂತರ ಜನ ಪ್ರಾಣಾರ್ಪಣೆ ಮಾಡಿದ್ದಾರೆ. ಅವರನ್ನು ನಾವೆಲ್ಲ ಸದಾ ಸ್ಮರಿಸುತ್ತಿರಬೇಕು. ಪ್ರಸ್ತುತ ದಿನಗಳಲ್ಲಿ ಮಾತೃಭಾಷೆ ಉಳಿಸುವುದು ಸಹ ಸ್ವರಾಜ್ಯ ಉಳಿಸುವ ಭಾಗವಾಗಿದೆ. ಆಂಗ್ಲ ಭಾಷೆಯ ವ್ಯಾಮೋಹ ಕಡಿಮೆಯಾಗಬೇಕು. ದೇಶ, ಸಂಸ್ಕೃತಿಯ ರಕ್ಷಣೆಯಾಗಬೇಕಾದರೆ ಮೊದಲು ಮಾತೃ ಭಾಷೆ ಉಳಿಯಬೇಕು’ ಎಂದರು.

ಡಾ. ಕ್ರಾಂತಿಕಿರಣ ಮಾತನಾಡಿದರು. ಪ್ರಾಂತ ಸಹ ಕಾರ್ಯವಾಹ ಕಿರಣ ಗುಡ್ಡದಕೇರಿ, ಪ್ರಾಂತ ಸಹ ಪ್ರಚಾರಕ ಶ್ರೀನಿವಾಸ ನಾಯಕ ಇದ್ದರು.

‘ದೇಶ ನನ್ನದು ಭಾವ ಮೂಡಲಿ’
ಹುಬ್ಬಳ್ಳಿ:
ಕೇಶ್ವಾಪುರದ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಶುಕ್ರವಾರ ಒಂದೇ ದಿನ ದೇಶದಲ್ಲಿ ಒಂದು ಕೋಟಿಗೂ ಅಧಿಕ ಧ್ವಜ ಖರೀದಿಯಾಗಿದೆ. ಸ್ವಾತಂತ್ರ್ಯದೊರೆತ 75 ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಹೊಂದಿದೆ. ಭಾರತದ ಪ್ರಸ್ತುತೆ ಮತ್ತು ಅನಿವಾರ್ಯತೆ ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಮಹತ್ವ ಪಡೆಯುತ್ತಿದೆ. ವಿಶ್ವಶಾಂತಿಗೆ ಭಾರತದ ಮಧ್ಯಸ್ಥಿಕೆ ಬಯಸುತ್ತಿರುವುದು ಹೆಮ್ಮೆಯ ಸಂಗತಿ. ಪ್ರತಿಯೊಬ್ಬರೂ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು. ದೇಶ ನನ್ನದು ಎನ್ನುವ ಭಾವ ಮೂಡಿದಾಗ ಯಾವ ಸ್ವಾರ್ಥವೂ ಇರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.