ADVERTISEMENT

ದಂಡ ಹಾಕಿದರೂ ನಿಯಮಕ್ಕಿಲ್ಲ ಕಿಮ್ಮತ್ತು

ವಾಹನ ಸವಾರರ ನಿರ್ಲಕ್ಷ್ಯ, ಸಂಚಾರ ಪೊಲೀಸರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 3:59 IST
Last Updated 31 ಮಾರ್ಚ್ 2022, 3:59 IST
9
9   

ಹುಬ್ಬಳ್ಳಿ: ಸಂಚಾರ ನಿಯಮಗಳ ಪಾಲನೆಗೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರೂ, ನಿಯಮ ಉಲ್ಲಂಘನೆ ಪ್ರಕರಣಗಳು ಹೇಳಿಕೊಳ್ಳುವ ಮಟ್ಟಿಗೆ ಕಡಿಮೆಯಾಗಿಲ್ಲ.

ಹೆಲ್ಮೆಟ್‌ ಧರಿಸದಿರುವುದು, ವೇಗದ ಚಾಲನೆ, ಮದ್ಯ ಕುಡಿದು ವಾಹನ ಚಾಲನೆ, ತ್ರಿಬಲ್ ರೈಡಿಂಗ್‌, ಸಿಗ್ನಲ್‌ ಜಂಪ್‌ ಮಾಡುವುದು ಮೊದಲಾದ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿವೆ. ನಿಯಮ ಉಲ್ಲಂಘಿಸುವವರಿಂದ ದಂಡ ಕಟ್ಟಿಸಿಕೊಳ್ಳಲಾಗುತ್ತಿದ್ದರೂ, 2021ರಲ್ಲಿ 1,51,262 ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ.

21 ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯ: ನಿಯಮ ಉಲ್ಲಂಘನೆ ಪ್ರಕರಣಗಳನ್ನು ಮತ್ತೆ ಹಚ್ಚಲೆಂದಲೇ ಸಿಗ್ನಲ್ ಇರುವೆಡೆ ಹಾಗೂ ಪ್ರಮುಖ ತಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ನಗರದ ವಿವಿಧೆಡೆ 57 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 36 ಸಕ್ರಿಯವಾಗಿದ್ದು, 21 ನಿಷ್ಕ್ರಿಯವಾಗಿವೆ.

ADVERTISEMENT

2022 ಜನವರಿ 31ರವರೆಗಿನ ಇಲಾಖೆಯ ಮಾಹಿತಿಯಂತೆ ಒಟ್ಟು 9,807 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ₹46.78 ಲಕ್ಷ ದಂಡ ವಿಧಿಸಲಾಗಿದೆ. ಸಿಗ್ನಲ್ ಸೇರಿದಂತೆ ವಾಹನಗಳ ಸಂಚಾರ ಹೆಚ್ಚಿರುವ ಕಡೆಗಳಲ್ಲಿ ನಿಲ್ಲುವ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡಿದ ಮೊತ್ತ ₹45.90 ಲಕ್ಷ ಆಗಿದೆ. ಪೊಲೀಸರ ಕೈಗೆ ಸಿಗದೆ ವೇಗವಾಗಿ ಚಲಿಸಿ ತಪ್ಪಿಸಿಕೊಳ್ಳುವವರ ವಾಹನಗಳಿಗೆ ಸಿಸಿಟಿವಿ ಕ್ಯಾಮೆರಾ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಿದ ಮೊತ್ತ ₹88,500.

ಸಂಚಾರ ಪೊಲೀಸರು ಬಳಸುವ ಪಿಡಿಎ ಯಂತ್ರ 74, ಮೊಬೈಲ್ ಆ್ಯಪ್ 100, ಬಾಡಿ ವಾರ್ಮ್‌ ಕ್ಯಾಮೆರಾ 25, ಬ್ರೀತ್ ಅನಲೈಸರ್‌ 37 ಇವೆ ಎಂದು ಇಲಾಖೆಯ ಮಾಹಿತಿ ತಿಳಿಸುತ್ತದೆ.

ಹೆಲ್ಮೆಟ್‌ ಧರಿಸದ ಪ್ರಕರಣಗಳೇ ಹೆಚ್ಚು: ಬೈಕ್‌ನಲ್ಲಿ ಸಂಚರಿಸುವವರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂಬ ನಿಯಮವನ್ನು ಬಹುತೇಕ ಮಂದಿ ಗಾಳಿಗೆ ತೂರಿದ್ದಾರೆ. ಸಿಗ್ನಲ್‌, ಸರ್ಕಲ್‌ ಮೊದಲಾದೆಡೆ ಸಂಚಾರ ಪೊಲೀಸರು ನಿಂತು ಹೆಲ್ಮೆಟ್‌ ಧರಿಸದವರಿಂದ ದಂಡ ಕಟ್ಟಿಸಿಕೊಂಡು, ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಆದರೂ, ಕೆಲವರು ಹೆಲ್ಮೆಟ್‌ ಧರಿಸುವುದೇ ಇಲ್ಲ. ಪೊಲೀಸರು ಕಂಡ ತಕ್ಷಣ ಬೈಕ್‌ ತಿರುಗಿಸಿಕೊಂಡು ಇಲ್ಲವೇ ಅವರ ಕೈಗೆ ಸಿಗದಂತೆ ವೇಗವಾಗಿ ಸಾಗುವ ದೃಶ್ಯ ನಿತ್ಯ ನಗರದಲ್ಲಿ ಕಂಡುಬರುತ್ತಿದೆ.

ಇಲಾಖೆಯ ಮಾಹಿತಿಯಂತೆ 2021ರಲ್ಲಿ 18,865 ಹೆಲ್ಮೆಟ್‌ ಧರಿಸದ ಪ್ರಕರಣ ದಾಖಲಾಗಿವೆ. 2873 ಸೀಟ್‌ ಬೆಲ್ಟ್‌ ಧರಿಸದ, 256 ಮದ್ಯ ಸೇವಿಸಿ ವಾಹನ ಚಾಲನೆ, 1,083 ವೇಗದ ಚಾಲನೆ, 145 ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ, 1834 ಸಿಗ್ನಲ್‌ ಉಲ್ಲಂಘನೆ, 3,952 ನೋ ಎಂಟ್ರಿ, 3652 ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸಿದ ಪ್ರಕರಣಗಳು ಹುಬ್ಬಳ್ಳಿಯ ಮೂರು ವಲಯಗಳ ಠಾಣೆಗಳಲ್ಲಿ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.