ಹುಬ್ಬಳ್ಳಿ: ರಾಜ್ಯ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಅಡಿ ಧಾರವಾಡ ಜಿಲ್ಲೆಗೆ ಎರಡು ‘ಅಕ್ಕ ಕೆಫೆ’ ಮಂಜೂರು ಮಾಡಿದೆ. ಧಾರವಾಡ ನಗರ ಮತ್ತು ಕಲಘಟಗಿ ತಾಲ್ಲೂಕಿನಲ್ಲಿ ತಲಾ ಒಂದೊಂದು ಕೆಫೆ ಸ್ಥಾಪಿಸಲು ಮುಂದಾಗಿದೆ.
ಮಹಿಳೆಯರ ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಈ ವರ್ಷ ರಾಜ್ಯದಾದ್ಯಂತ 50ಕ್ಕೂ ಅಧಿಕ ಅಕ್ಕ ಕೆಫೆ ಸ್ಥಾಪನೆಯ ಗುರಿ ಹೊಂದಿದೆ. ‘ಅಕ್ಕ ಕೆಫೆ’ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಹಾರ ಒದಗಿಸುವ ಯೋಜನೆ ಹೊಂದಿದೆ.
ಜಿಲ್ಲೆಯಲ್ಲಿ ಧಾರವಾಡ ನಗರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿಂಭಾಗದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಹಾಗೂ ಕಲಘಟಗಿ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅಕ್ಕ ಕೆಫೆ ಸ್ಥಾಪನೆಗೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಈಗಾಗಲೇ ಧಾರವಾಡದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ (ಕೆಆರ್‌ಐಡಿಎಲ್) ವತಿಯಿಂದ ಅಕ್ಕ ಕೆಫೆ ನಿರ್ಮಾಣಕ್ಕೆ ಬೇಕಾದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.
‘ಜಿಲ್ಲೆಗೆ ಎರಡು ಅಕ್ಕ ಕೆಫೆಗಳು ಲಭ್ಯವಾಗಿವೆ. ಧಾರವಾಡದಲ್ಲಿ ₹15 ಲಕ್ಷ ವೆಚ್ಚದಲ್ಲಿ, ಕಲಘಟಗಿಯಲ್ಲಿ ₹5.80 ಲಕ್ಷ ವೆಚ್ಚದಲ್ಲಿ ಅಕ್ಕ ಕೆಫೆ ನಿರ್ಮಾಣ ಮಾಡಲಾಗುವುದು. ಬಳಿಕ ನಿರ್ವಹಣೆಗಾಗಿ ಅದರ ಹೊಣೆಯನ್ನು ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದು’ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿನೋದ್ ಕಂಠಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಾರದ ಹಣದಿಂದಲೇ ಅಕ್ಕ ಕೆಫೆ ನಿರ್ಮಾಣ ಮಾಡಲಾಗುವುದು. ಬಳಿಕ ಕೆಫೆಯನ್ನು ಮಹಿಳಾ ಸ್ವಸಹಾಯ ಗುಂಪಿಗೆ ಹಸ್ತಾಂತರ ಮಾಡಲಾಗುವುದು. ಆನಂತರ ಕೆಫೆಯ ಖರ್ಚು ವೆಚ್ಚ, ಆದಾಯ ಎಲ್ಲವೂ ಸ್ವಸಹಾಯ ಗುಂಪಿಗೇ ಸೇರಿದ್ದು. ಸ್ವಸಹಾಯ ಗುಂಪುಗಳ ಆಯ್ಕೆಗೆ ಸಮಿತಿ ಇದ್ದು, ಉತ್ತಮ ಸ್ವಸಹಾಯ ಗುಂಪುಗಳನ್ನು ಆಯ್ಕೆ ಮಾಡಲಿದೆ’ ಎಂದರು.
‘ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಹಿಳಾ ಸ್ವಸಹಾಯ ಗುಂಪುಗಳಿವೆ. ಅವುಗಳಲ್ಲಿ ಸುಮಾರು 70 ಸ್ವಸಹಾಯ ಗುಂಪುಗಳು ಅಡುಗೆ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗುಣಮಟ್ಟದ ಆಹಾರ ಪೂರೈಸುವ ಸ್ವಸಹಾಯ ಗುಂಪುಗಳನ್ನು ಸಮಿತಿಯು ಮೇಲ್ವಿಚರಣೆ ನಡೆಸಿ, ಎರಡು ಗುಂಪುಗಳಿಗೆ ಅಕ್ಕ ಕೆಫೆ ನಿರ್ವಹಿಸಲು ಅವಕಾಶ ನೀಡಲಾಗುವುದು’ ಎನ್ನುತ್ತಾರೆ ವಿನೋದ ಕಂಠಿ.
ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಯಾಂಟೀನ್ ಇತ್ತು. ಆದರೆ ಅದನ್ನು ಬಂದ್ ಮಾಡಿದ್ದರಿಂದ ಇಲ್ಲಿಗೆ ಬರುವವರು ಊಟ, ಉಪಹಾರಕ್ಕಾಗಿ ಬೇರೆಡೆ ಹೋಗುವಂತಾಗಿದೆ. ಇದೀಗ ಅಕ್ಕ ಕೆಫೆ ಸ್ಥಾಪನೆಯಿಂದ ಸುತ್ತಮುತ್ತಲಿನ ಕಚೇರಿಗಳ ನೌಕರರಿಗೆ, ಸಿಬ್ಬಂದಿಗೆ, ಕಚೇರಿಗಳಿಗೆ ಆಗಮಿಸುವ ಜನರಿಗೆ, ಕಾರ್ಮಿಕರಿಗೆ ಸಹಕಾರಿ ಆಗಲಿದೆ’ ಎಂದು ಧಾರವಾಡದ ನವೀನ ಕತ್ತಿ ಹೇಳಿದರು.
‘ಕಲಘಟಗಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅಕ್ಕ ಕೆಫೆ ಸ್ಥಾಪನೆಯಿಂದಾಗಿ ಇಲ್ಲಿಗೆ ಬರುವ ಜನರಿಗೆ ತುಂಬಾ ಅನುಕೂಲ ಆಗಲಿದೆ. ನಿರ್ವಹಣೆ ಜವಾಬ್ದಾರಿಯನ್ನು ಉತ್ತಮ ಸ್ವಸಹಾಯ ಗುಂಪಿಗೆ ನೀಡಬೇಕು. ಆಹಾರ ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಬೇಕು. ದರವು ಜನಸಾಮಾನ್ಯರ ಸ್ನೇಹಿ ಆಗಿರಲಿ’ ಎನ್ನುತ್ತಾರೆ ಕಲಘಟಗಿ ನಿವಾಸಿ ಪ್ರವೀಣ.
ಮೂರು ತಿಂಗಳಿಗೊಮ್ಮೆ ಆಹಾರದ ಗುಣಮಟ್ಟದ ಬಗ್ಗೆ ಸಮಿತಿ ಮೌಲ್ಯಮಾಪನ ಮಾಡುತ್ತದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಬೇರೆಯವರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗುವುದುವಿನೋದ ಕಂಠಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಎನ್‌ಆರ್‌ಎಲ್‌ಎಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.