ADVERTISEMENT

ಅಪಘಾತ ಸಂದರ್ಭದಲ್ಲಿ ಕಾರು ಓಡಿಸುತ್ತಿದ್ದವನು ನಾನೇ: ವಿಜಯ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 8:16 IST
Last Updated 13 ಏಪ್ರಿಲ್ 2021, 8:16 IST
ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ವಿಜಯ ಕುಲಕರ್ಣಿ
ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ವಿಜಯ ಕುಲಕರ್ಣಿ   

ಧಾರವಾಡ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದ ಸಂದರ್ಭದಲ್ಲಿ ಕಾರನ್ನು ನಾನೇ ಓಡಿಸುತ್ತಿದ್ದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ವಿಜಯ ಕುಲಕರ್ಣಿ ಹೇಳಿದ್ದಾರೆ.

ಇಲ್ಲಿನ ಕುಮಾರೇಶ್ವರ ನಗರ ಬಳಿ ಸೋಮವಾರ ಸಂಜೆ ತಮ್ಮ ಕಿಯಾ ಕಾರ್ನಿವಲ್ (ಕೆಎ–25–ಪಿ–007) ರಸ್ತೆಪಕ್ಕದಲ್ಲಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಚರಣ ನಾಯಕ್ (17) ಹಾಗೂ ಶೇಖರ ಹುದ್ದಾರ (40) ಎಂಬುವವರು ಮೃತಪಟ್ಟಿದ್ದರು. ಇನ್ನಿಬ್ಬರಿಗೆ ಗಾಯಗಳಾಗಿದ್ದವು.

ಭಾನುವಾರ ತಡರಾತ್ರಿ 12ರ ಸುಮಾರಿಗೆ ಸಂಚಾರ ಠಾಣೆಗೆ ಭೇಟಿ ನೀಡಿದ ವಿಜಯ ಕುಲಕರ್ಣಿ, ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬೆಳಗಾವಿ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್ ತಪ್ಪಿಸುವ ಪ್ರಯತ್ನದಲ್ಲಿ, ಪಕ್ಕದಲ್ಲಿದ್ದ ಬೈಕ್‌ಗಳಿಗೆ ಡಿಕ್ಕಿಯಾಗಿದೆ ಎಂದು ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ADVERTISEMENT

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಜಯ ಕುಲಕರ್ಣಿ, ‘ಬೆಳಗಾವಿಯಿಂದ ಬರುವ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಸವಾರನ ತಪ್ಪಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅಪಘಾತ ನಡೆದ ತಕ್ಷಣ ಪೊಲೀಸರಿಗೆ ನಾನೇ ಕರೆ ಮಾಡಿ ಮಾಹಿತಿ ನೀಡಿದೆ. ಆಂಬುಲೆನ್ಸ್ ಕರೆಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿ, ಸ್ಥಳದಿಂದ ನಾನು ನಿರ್ಗಮಿಸಿದೆ’ ಎಂದಿದ್ದಾರೆ.

‘ಆದರೆ ಕೆಲವು ಮಾಧ್ಯಮಗಳಲ್ಲಿ ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದರು ಎಂದು ತಪ್ಪಾಗಿ ಪ್ರಸಾರ ಮಾಡಿದ್ದಾರೆ. ಅದಕ್ಕಾಗಿಯೇ ನಾನು ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿ, ಅವರೊಂದಿಗೆ ಜಿಲ್ಲಾ ಆಸ್ಪತ್ರೆಗೆ ತೆರಳಿ ರಕ್ತದ ಮಾದರಿಯನ್ನೂ ನೀಡಿ ಬಂದಿದ್ದೇನೆ. ಇದೊಂದು ಆಕಸ್ಮಿಕ ದುರಂತ’ ಎಂದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆ ಪೊಲೀಸರು, ಕಾರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.