ಹುಬ್ಬಳ್ಳಿ: ಹಿಂದೂ ಸಂವತ್ಸರದ ಮೊದಲ ಹಬ್ಬ ಯುಗಾದಿ. ನವ ವರುಷಕ್ಕೆ ನವೋಲ್ಲಾಸದ ಸಿದ್ಧತೆ ಮತ್ತು ಹೊಸತನ್ನು ತರುವ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮತ್ತು ಕ್ರೋಧಿನಾಮ ಸಂವತ್ಸರವನ್ನು ಸ್ವಾಗತಿಸಲು ವಾಣಿಜ್ಯನಗರಿ ಹುಬ್ಬಳ್ಳಿಯ ಜನ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಬೇವು–ಬೆಲ್ಲದ ಹಬ್ಬ ಯುಗಾದಿಗೆ ಗ್ರಾಹಕರು ಪೂಜಾ ಸಾಮಗ್ರಿ ಖರೀದಿಸಲು ನಗರದ ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದರು. ಮಾರುಕಟ್ಟೆ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.
ಶನಿವಾರ ಅಮಾವಾಸ್ಯೆ ಪೂಜೆ ನೆರವೇರಿಸಿದ ಜನರು, ವಸ್ತುಗಳ ಬೆಲೆ ಏರಿಕೆ, ಉರಿ ಬಿಸಿಲಿನ ನಡುವೆಯೂ ದುರ್ಗದಬೈಲ್, ಜನತಾ ಬಜಾರ್, ಹಳೇಹುಬ್ಬಳ್ಳಿ ಮಾರುಕಟ್ಟೆ, ಕೇಶ್ವಾಪುರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಖರೀದಿಯಲ್ಲಿ ತೊಡಗಿದ್ದರು. ಸಂಜೆಯಾಗುತ್ತಿದ್ದಂತೆ ಜನಸಂದಣಿ ಮತ್ತಷ್ಟು ಹೆಚ್ಚಾದ ಕಾರಣ, ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಸಂಚಾರ ಸಹ ಅಸ್ತವ್ಯಸ್ತವಾಗಿತ್ತು. ಜನದಟ್ಣಣೆ ಹೆಚ್ಚಿದ ಜಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದುದು ಕಂಡುಬಂತು.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಬಂದಿದ್ದ ಗ್ರಾಹಕರು ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಹೂವು, ಹಣ್ಣು, ಬಾಳೆ ಕಂಬ, ತರಕಾರಿ, ಮಾವಿನ ತಳಿರು ಮತ್ತು ಬೇವಿನ ಸೊಪ್ಪಿಗೆ ಬೇಡಿಕೆ ಹೆಚ್ಚಿತ್ತು. ಕೆಲ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ಬೇವು, ಬೆಲ್ಲ, ಅಲಂಕಾರಿಕ ಹಾಗೂ ಗೃಹ ಬಳಕೆಯ ವಸ್ತುಗಳು, ಬಟ್ಟೆಗಳನ್ನು ಮಾರುತ್ತಿದ್ದರು.
ದಾಜಿಬಾನಪೇಟೆ, ಮೂರುಸಾವಿರಮಠ ರಸ್ತೆ, ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ ಸುತ್ತಲಿರುವ ಹಾಗೂ ಕೆಲವು ಮಾಲ್‌ಗಳಲ್ಲಿರುವ ಚಿನ್ನಾರಣ ಅಂಗಡಿ, ಸೀರೆ, ಬಟ್ಟೆ ಅಂಗಡಿ, ಆರ್ಟಿಫಿಷಿಯಲ್ ಜ್ಯುವೆಲ್ಲರಿ, ಬಳೆಗಳ ಅಂಗಡಿಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಮಳಿಗೆ ಸಿಬ್ಬಂದಿ ವಿವಿಧ ರಿಯಾಯಿತಿ, ಆಫರ್‌ಗಳನ್ನು ನೀಡಿ ಗ್ರಾಹರನ್ನು ಆಕರ್ಷಿಸುತ್ತಿದ್ದರು. ಖರೀದಿ ಭರಾಟೆಯಲ್ಲಿ ಬಿಸಿಲಿನ ತಾಪಕ್ಕೆ ಹೈರಾಣದ ಜನ ಐಸ್‌ಕ್ರೀಂ, ತಂಪು ಪಾನೀಯ, ಎಳನೀರು, ಕಬ್ಬಿನ ಹಾಲು ಸವಿದು ದಣಿವಾರಿಸಿಕೊಂಡರು.
ಹೊಸ ವರ್ಷದ ಪಂಚಾಂಗ, ಜಾತಕಫಲ, ಮಳೆ, ನಕ್ಷತ್ರಗಳ ಮಾಹಿತಿ, ಭವಿಷ್ಯಗಳಿರುವ ಪಂಚಾಂಗಗಳ ಖರೀದಿಯೂ ಹೆಚ್ಚಾಗಿತ್ತು. ನಗರದ ಪ್ರಮುಖ ದೇವಸ್ಥಾನ, ಗುಡಿಗಳನ್ನು ಶುಚಿಗೊಳಿಸಿ, ಉತ್ಸವಕ್ಕೆ ವೇದಿಕೆಗಳನ್ನು ಸಜ್ಜುಗೊಳಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಬಿಸಿಲಿನ ಶಾಖ ದಿನೇದಿನೇ ಹೆಚ್ಚಾಗುತ್ತಿದ್ದು ಬೆಂಗಳೂರಿನಿಂದಲೇ ಇಲ್ಲಿನ ಮಾರುಕಟ್ಟೆಗೆ ಬರುವ ಹೂವಿನ ಪ್ರಮಾಣ ಕಡಿಮೆ ಇದೆ. ಅಲ್ಲಿಯೂ ದರ ಹೆಚ್ಚಾದ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲೂ ಹೂವಿನ ದರ ₹50ರಿಂದ ₹80 ಏರಿಕೆಯಾಗಿದೆಮುಕ್ತಾರ್, ಹೂವಿನ ವ್ಯಾಪಾರಿ ದುರ್ಗದ್ ಬೈಲ್
ಅಗತ್ಯ ವಸ್ತುಗಳ ದರ ದಿನೇದಿನೇ ಗಗನಕ್ಕೇರುತ್ತಿದೆ. ಇದರ ನಡುವೆಯೂ ಅಗತ್ಯದಷ್ಟು ವಸ್ತುಗಳನ್ನು ಖರೀದಿಸಿ ಹಬ್ಬ ಮಾಡುತ್ತಿದ್ದೇವೆಸಿದ್ದಮ್ಮಾ ಬಿ, ಗ್ರಾಹಕಿ ನವನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.