ಹುಬ್ಬಳ್ಳಿ ಹೊರವಲಯದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಸಮೀಪ ನಿರ್ಮಾಣವಾದ ಅನಧಿಕೃತ ತ್ಯಾಜ್ಯ ವಿಲೇವಾರಿ ಘಟಕ
ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಹುಬ್ಬಳ್ಳಿ: ವಿಮಾನ ನಿಲ್ದಾಣದ ಕೂಗಳತೆ ದೂರದಲ್ಲಿ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೂ ಮೊದಲು, ಹುಬ್ಬಳ್ಳಿ ಬೈಪಾಸ್ ರಸ್ತೆ ಬಳಿ 15ರಿಂದ 20 ಎಕರೆ ಜಾಗವು ‘ಅನಧಿಕೃತ ತ್ಯಾಜ್ಯ ಘಟಕ’ವಾಗಿ ಪರಿವರ್ತನೆಯಾಗಿದೆ!
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತಕ್ಕೆ ಸೇರಿದ ಈ ಜಾಗದಲ್ಲಿ ಕಟ್ಟಡ ಅಲ್ಲದೇ ಕೈಗಾರಿಕಾ ತ್ಯಾಜ್ಯ, ಕಸ, ಪ್ರಾಣಿಗಳ ಕಳೇಬರಗಳು ಬಿದ್ದಿವೆ. ಅವುಗಳನ್ನು ತಿನ್ನಲು ಕಾಗೆಗಳು, ನಾಯಿಗಳ ಗುಂಪು ಓಡಾಡುತ್ತವೆ. ಅಲ್ಲಲ್ಲಿ ಬಿದ್ದ ಮದ್ಯ ಬಾಟಲಿಗಳು, ಕಸದ ರಾಶಿಯನ್ನು ಒಯ್ಯಲು ಚಿಂದಿ ಆಯುವವರು ಬರುತ್ತಾರೆ. ಜೊತೆಗೆ ದುರ್ವಾಸನೆ, ಸುಟ್ಟ ತ್ಯಾಜ್ಯದ ಹೊಗೆ ದಿನಪೂರ್ತಿ ಇರುತ್ತದೆ. ಇದೆಲ್ಲವನ್ನೂ ನೋಡಿದರೆ, ಅಂಚಟಗೇರಿಯಲ್ಲಿ ಅಲ್ಲದೇ ಇನ್ನೊಂದು ಘಟಕ ಇಲ್ಲಿ ಆರಂಭವಾದಂತೆ ಭಾಸವಾಗುತ್ತದೆ.
ಈ ಆವರಣದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಖಾಲಿ ಬಿದ್ದ ಹಳೆಯ ದಾಸ್ತಾನು ಕಟ್ಟಡ ಇದೆ. ರಸ್ತೆಗೆ ಅಡ್ಡವಾಗಿ ಕಾಂಪೌಂಡ್ ಕಟ್ಟಲಾಗಿದೆ. ಆವರಣದ ಒಳಗಿನ ಜಾಗವೀಗ ತ್ಯಾಜ್ಯ ಎಸೆಯುವ ಸ್ಥಳವಾಗಿದೆ. ಟ್ರಕ್, ಟ್ರ್ಯಾಕ್ಟರ್, ಟಂಟಂಗಳಲ್ಲಿ ಕಸ ಸಂಗ್ರಹಿಸಿಕೊಂಡು ತಂದು ಎಸೆದು ಹೋಗುತ್ತಾರೆ. ಗಾಮನಗಟ್ಟಿ, ತಾರಿಹಾಳ ಕೈಗಾರಿಕೆ ಪ್ರದೇಶದ ತ್ಯಾಜ್ಯವನ್ನೂ ಇಲ್ಲಿಯೇ ಎಸೆಯಲಾಗುತ್ತದೆ. ಅಚ್ಚರಿಯೆಂದರೆ, ಹೀಗೆ ಕಸ ಎಸೆಯುವ ಪಟ್ಟಿಯಲ್ಲಿ ಪಾಲಿಕೆ ವಾಹನಗಳದ್ದೂ ಪಾಲಿದೆ. ಆವರಣದ ಒಳಗೆ ಹೋಗುವ ದಾರಿಯೂ ಕಸದಿಂದ ಭರ್ತಿಯಾಗುತ್ತಿದ್ದು, ದಿನೇ ದಿನೇ ಚಿಕ್ಕದಾಗುತ್ತಿದೆ.
‘ಎರಡು-ಮೂರು ತಿಂಗಳಿನಿಂದ ಈ ಸ್ಥಳದಲ್ಲಿ ಕಸದ ರಾಶಿ ಹೆಚ್ಚುತ್ತಿದೆ. ಪಾಲಿಕೆ ವಾಹನಗಳು ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನೂ ಬೆಳಿಗ್ಗೆ ಇಲ್ಲಿಗೆ ತಂದು ಹಾಕುತ್ತಿವೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಲಾರಿ, ಟ್ರಕ್‌ನಂತಹ ಭಾರಿ ವಾಹನಗಳ ಚಾಲಕರು ತಮ್ಮ ವಾಹನದ ನಿರುಪಯುಕ್ತ ಎಂಜಿನ್ ಆಯಿಲ್‌ನ್ನು ಇಲ್ಲಿಯೇ ಹೊರಹಾಕಿ ಹೋಗುತ್ತಿದ್ದಾರೆ. ನಿರ್ಜನ ಪ್ರದೇಶವಾದ್ದರಿಂದ ಕುಡುಕರ ತಾಣವಾಗಿದೆ.ಹೊಗೆ ಮತ್ತು ದುರ್ವಾಸನೆ ಸುತ್ತೆಲ್ಲ ಹರಡಿ ವಾತಾವರಣ ಗಬ್ಬೆದ್ದಿದೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
‘ಸೌಲಭ್ಯ ಕೊರತೆಯಿಂದ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೆ ಬರಲು ಜನ ಹಿಂದೇಟು ಹಾಕುತ್ತಾರೆ. ಕೆಲಸಕ್ಕೆ ಮಹಿಳಾ ಸಿಬ್ಬಂದಿ ಸಿಗುವುದೇ ಕಷ್ಟ. ಈ ರೀತಿಯ ವಾತಾವರಣ ನಿರ್ಮಾಣವಾದರೆ ಈ ಭಾಗದ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಜನ ಹಿಂಜರಿಯುತ್ತಾರೆ’ ಎಂದು ಇಲ್ಲಿನ ಕಾರ್ಖಾನೆಯೊಂದರ ಮಾಲೀಕರು ತಿಳಿಸಿದರು.
ಘನತ್ಯಾಜ್ಯ ಕಟ್ಟಡ ತ್ಯಾಜ್ಯ ಕಂಡಕಂಡಲ್ಲಿ ಎಸೆಯುವುದು ಕಾನೂನು ಬಾಹಿರ. ಪರಿಶೀಲಿಸಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡುವೆ.– ಸುಭಾಶ ಅಡಿ, ಅಧ್ಯಕ್ಷ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ರಾಜ್ಯಮಟ್ಟದ ಸಮಿತಿ
ಕೈಗಾರಿಕಾ ಪ್ರದೇಶದ ಖಾಲಿ ಜಾಗ ಯಾರದ್ದೆಂದು ಪರಿಶೀಲಿಸಿ ಪಾಲಿಕೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲು ಸೂಚಿಸುವೆ.–ದಿವ್ಯಪ್ರಭು, ಜಿಲ್ಲಾಧಿಕಾರಿ
ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನದಲ್ಲಿ ಅನಧಿಕೃತವಾಗಿ ತ್ಯಾಜ್ಯ ಸಂಗ್ರಹಿಸಿ ಸುಡುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.–ರುದ್ರೇಶ ಘಾಳಿ, ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಸಹಕಾರ ಮಾರಾಟ ಮಹಾಮಂಡಳದ ಪ್ರದೇಶದಲ್ಲಿ ಕಸ ಎಸೆಯುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.–ರವಿಂದ ಬೆಲ್ಲದ, ಶಾಸಕ
‘ಪಾಲನೆಯಾಗದ ಸೂಚನೆ’
‘ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಬೈಲಾ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಸರ್ಕಾರ ನೂರಾರು ಕೋಟಿ ವೆಚ್ಚ ಮಾಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಸಮರ್ಪಕವಾಗಿ ನಡೆಯುತ್ತಿಲ್ಲ’ ಸಾಮಾಜಿಕ ಕಾರ್ಯಕರ್ತ ಲಿಂಗರಾಜ ಧಾರವಾಡಶೆಟ್ಟರ್ ತಿಳಿಸಿದರು. ‘ನಗರ ಸ್ವಚ್ಛತೆ ಬಗ್ಗೆ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸುಭಾಶ ಅಡಿ ಅವರು ಸಭೆ ನಡೆಸಿದಾಗಲೆಲ್ಲ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ. ಆದರೆ ಅವುಗಳ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ವಿಮಾನ ನಿಲ್ದಾಣದ ಪಕ್ಕದ ಹತ್ತಾರು ಎಕರೆ ಜಾಗದಲ್ಲಿ ಅನಧಿಕೃತವಾಗಿ ತ್ಯಾಜ್ಯ ರಾಶಿ ಬಿದ್ದಿರುವುದು ಸೋಜಿಗದ ಸಂಗತಿ’ ಎಂದರು.
‘ಅಭಿವೃದ್ಧಿಗೆ ತೊಡಕು’
ಒಂದೆಡೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಮೆರಗು ನೀಡಲು ಸರ್ಕಾರ ಮುಂದಾಗಿದೆ. ಅಭಿವೃದ್ಧಿ ಕಾಮಗಾರಿಯೂ ಚಾಲ್ತಿಯಲ್ಲಿದೆ. ಆದರೆ ಅದರ ಸಮೀಪವೇ ಈ ತ್ಯಾಜ್ಯ ಘಟಕ ಆರಂಭವಾಗಿದೆ. ಇದರಿಂದ ಏಳುವ ಹೊಗೆ ವಿಮಾನಗಳ ಹಾರಾಟಕ್ಕೆ ತೊಂದರೆಯಾಗುವ ಸಾಧ್ಯತೆಯೂ ಇದೆ. ಅಲ್ಲದೇ ಈ ಪ್ರದೇಶದಿಂದ 1 ಕೀ.ಮಿ ಅಂತರದಲ್ಲಿ ಇನ್‌ಫೋಸಿಸ್ ಕಟ್ಟಡವಿದೆ. ಪಕ್ಕದಲ್ಲೇ ಗಾಮನಗಟ್ಟಿ ತಾರಿಹಾಳ ಕೈಗಾರಿಕಾ ಪ್ರದೇಶವೂ ಇದೆ. ಇಲ್ಲಿ ಕೆಲಸ ಮಾಡಲು ಬರುವವವರ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುವುದರಿಂದ ಜನರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದು ಅಭಿವೃದ್ಧಿಗೆ ತೊಡಕಾಗಿದೆ. ‘ಈ ಪ್ರದೇಶದ ಪಕ್ಕದಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸುತ್ತಿದ್ದೇವೆ. ತ್ಯಾಜ್ಯ ತಂದು ಎಸೆಯುತ್ತಿರುವುದರಿಂದ ಬಡಾವಣೆ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಪಾಲಿಕೆ ವಾಹನಗಳೂ ಇಲ್ಲಿ ಕಸ ಎಸೆಯುತ್ತಿವೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಖಾಸಗಿ ಬಡಾವಣೆ ಮಾಲೀಕ ರಘು ಮೆಹರವಾಡೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.