ಧಾರವಾಡ ತಾಲ್ಲೂಕಿನ ಮಾದನಬಾವಿ ಗ್ರಾಮದ ಜಿಲ್ಲಾ ಸರ್ಕಾರಿ ಗೋಶಾಲೆ
ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಮಾದನಬಾವಿ ಗ್ರಾಮದ ಜಿಲ್ಲಾ ಸರ್ಕಾರಿ ಗೋಶಾಲೆಯಲ್ಲಿ ಸೌಕರ್ಯ ಸಮಸ್ಯೆಯಿಂದಾಗಿ ಜಾನುವಾರುಗಳು ಸಾವು, ನೋವಿನಿಂದ ಬಳಲುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಧಾರವಾಡ ಮತ್ತು ಕಿತ್ತೂರು ತಾಲ್ಲೂಕಿಗೆ ಹೊಂದಿಕೊಂಡಿರುವ ಮಾದನಬಾವಿ ಗ್ರಾಮದ ಜಿಲ್ಲಾ ಸರ್ಕಾರಿ ಗೋಶಾಲೆ ಎರಡು ವರ್ಷದ ಹಿಂದೆ ನಿರ್ಮಾಣವಾಗಿತ್ತು. ಇಲ್ಲಿ ಬೀಡಾಡಿ ದನಗಳು ಸೇರಿದಂತೆ ಕೆಲ ಗೋವು ಪ್ರಿಯರು, ಅಧಿಕಾರಿಗಳು ದತ್ತು ತೆಗೆದುಕೊಂಡ ಜಾನುವಾರು ಸೇರಿ ಒಟ್ಟು 100 ಜಾನುವಾರುಗಳು ಇಲ್ಲಿವೆ.
ಕಳೆದ ವರ್ಷ ಈ ಗೋವು ಶಾಲೆಯಲ್ಲಿ ಆಕಳು, ಎಮ್ಮೆ, ಎತ್ತುಗಳನ್ನು ಸಾಕಲಾಗುತ್ತಿದೆ. ಇವುಗಳಿಗೆ ಮೇವು, ಹೊಟ್ಟು ಸಹಿತ ಇನ್ನಿತರ ಪದಾರ್ಥಗಳನ್ನು ಕೊಡಲಾಗುತ್ತಿದೆ. ದಿನ ಕಳೆದಂತೆ ಅಧಿಕಾರಿಗಳು ಈ ಕಡೆ ಗಮನ ಹರಿಸದ ಕಾರಣ, ಕೆಲ ಜಾನುವಾರುಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕೊಟ್ಟಿಗೆಯಲ್ಲಿ ಮ್ಯಾಟ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಕೆಲ ಜಾನುವಾರುಗಳಿಗೆ ಗಾಯಗಳಾಗಿದ್ದು, ನೋಣ ಹಾಗೂ ಉಣ್ಣೆಗಳು ಮೆತ್ತಿಕೊಂಡಿವೆ. ಇಲ್ಲಿನ ಜಾನುವಾರುಗಳ ರೋಧನವನ್ನು ಕೇಳುವವರೇ ಇಲ್ಲವಾಗಿದೆ.
‘ಇಲ್ಲಿ ಧನ, ಕರುಗಳ ಪಾಲನೆಗಾಗಿ ಸಿಬ್ಬಂದಿ ನೇಮಕ ಮಾಡಲಾಗಿದ್ದು, ತಿಂಗಳಿಗೆ ಸರಿಯಾಗಿ ಮಾಶಾಸನ ಸಿಗದೆ ಅವರು ಗೋಶಾಲೆಯ ಸ್ವಚ್ಛತೆ ಮೇವು ಹಾಕುವ ಕಾರ್ಯವನ್ನು ಸುವ್ಯವಸ್ಥಿತವಾಗಿ ಮಾಡುತ್ತಿಲ್ಲ. ನೋವಿನಿಂದ ಸಾವಿಗೀಡಾದ ಜಾನುವಾರುಗಳ ಅಂತ್ಯ ಸಂಸ್ಕಾರವು ಸಹ ಸರಿಯಾಗಿ ಆಗುತ್ತಿಲ್ಲ. ಈ ಹಿಂದೆ ಧಾರವಾಡ ಜಿಲ್ಲಾಧಿಕಾರಿ ಅವರು ದತ್ತು ತೆಗೆದುಕೊಂಡಿದ್ದ ಎರಡು ಗೋವುಗಳು ಸಹ ಇಲ್ಲಿದ್ದವು’ ಎಂದು ಮಾದನಬಾವಿ ಗ್ರಾಮದ ನಿವಾಸಿಯೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.
‘ಸಮಯಕ್ಕೆ ಬಾರದ ಪಶುವೈದ್ಯರು’
‘ಮಾದನಬಾವಿ ಸರ್ಕಾರಿ ಗೋಶಾಲೆಯಲ್ಲಿ 60 ಜಾನುವಾರು ಸಾಕಲು ಮಾತ್ರ ಅವಕಾಶವಿದೆ. ಹಿಂದೂ ಸಂಘಟನೆಗಳ ಒತ್ತಾಯದ ಮೇರೆಗೆ ಹೆಚ್ಚುವರಿ 40 ಜಾನುವಾರುಗಳನ್ನು ಸಾಕಣೆ ಮಾಡುತ್ತಿದ್ದೇವೆ. ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕೆಲವರು ಅಶಕ್ತ ಜಾನುವಾರುಗಳನ್ನು ಇಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಅವು ಮೃತವಾದಾಗ ಶವ ಪರೀಕ್ಷೆ ಮಾಡುವ ಪಶುವೈದ್ಯರು ಸಮಯಕ್ಕೆ ಬಾರದ ಕಾರಣ ಸಮಸ್ಯೆ ಎದುರಾಗಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಮಸ್ಯೆಗಳನ್ನು ಸರಿಪಡಿಸಲಾಗುವುದು’ ಎನ್ನುತ್ತಾರೆ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ರವಿ ಸಾಲಿಗೌಡರ್.
ಗೋವುಗಳ ಪಾಲನೆ ಮಾಡುವುದಕ್ಕಾಗಿಯೇ ಸರ್ಕಾರ ಗೋಶಾಲೆ ತೆರೆದಿದೆ. ಆದರೆ, ಅವು ಹೆಸರಿಗಷ್ಟೆ ಎಂಬಂತಿವೆ. ಕೆಲ ಪಶುಗಳನ್ನು ಹಣಕ್ಕಾಗಿ ಬೇರೆಡೆಗೆ ಸಾಗಿಸಲಾಗುತ್ತಿದೆಶಿವಾನಂದ ಸತ್ತಿಗೇರಿ, ಸಂಚಾಲಕ ಭಜರಂಗದಳ ಧಾರವಾಡ ವಿಭಾಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.