
ಹುಬ್ಬಳ್ಳಿ: ‘ಯಾವುದೇ ವಿಷಯ ಕಲಿಯಲು ಐದು ಗೆಳೆಯರು ಸದಾ ನಮ್ಮ ಜೊತೆ ಇರಬೇಕು. ಅವುಗಳೆಂದರೆ ಏನು?, ಏಕೆ?, ಯಾರು?, ಎಲ್ಲಿ?, ಹೇಗೆ?’ ಎಂದು ಬೆಳಗಾವಿ ಜಿಲ್ಲೆ ಯಮಕನಮರಡಿ ಹುಣಸಿಕೊಳ್ಳಮಠದ ಶ್ರೀ ಜಗದ್ಗುರು ಶೂನ್ಯಸಂಪಾದನ ಪೀಠದ ಸಿದ್ಧಬಸವ ದೇವರು ಹೇಳಿದರು.
ತಾಲ್ಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ‘ಅರಳೀಕಟ್ಟೆ– ತೆರೆದ ವಾಚನಾಲಯ’ದ 46ನೇ ಚಟುವಟಿಕೆಯಾಗಿ ಶನಿವಾರ ಆಯೋಜಿಸಿದ್ದ ‘ಮೌಲ್ಯಗಳ ಬಿತ್ತಿ ಬೆಳೆಯೋಣ’ ಎಂಬ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿ, ‘ಈ ಐವರು ಗೆಳೆಯರು ನಮ್ಮನ್ನು ಗುರಿಯತ್ತ ನಿರ್ದೇಶಿಸುತ್ತಾರೆ. ಪ್ರಶ್ನಿಸುವಿಕೆ ನಮ್ಮ ಜ್ಞಾನದ ಹರವನ್ನು ಹೆಚ್ಚಿಸುತ್ತದೆ’ ಎಂದು ತಿಳಿಹೇಳಿದರು.
‘ಸ್ಪರ್ಧಾತ್ಮಕ ಯುಗದಲ್ಲಿ ಗೆಲುವು ಮಹತ್ವವಾಗಿದೆ. ಸೋತವನು ಮಾಡದೇ ಇರುವ ಕೆಲಸವನ್ನು ಮಾಡುವವರು ಗೆಲ್ಲುತ್ತಾರೆ. ಪರಿಶ್ರಮವನ್ನು ಪ್ರೀತಿಸುವವರು ಗೆಲ್ಲುತ್ತಾರೆ. ಗುರಿ ದೊಡ್ಡದಿರಲಿ. ಕನಸಿನ ಕಡೆಗೆ ಸಾಗುವ ಪಯಣದಲ್ಲಿ ಕಷ್ಟ, ತೊಂದರೆಗಳು ಬರುತ್ತವೆ. ಭಯಪಡದೆ ಅವುಗಳನ್ನು ಛಲದಿಂದ ಎದುರಿಸಿ’ ಎಂದು ಕರೆ ನೀಡಿದರು.
ಶರಣ ಚಿಂತಕ ಬಸವರಾಜ ಕಮಡೊಳ್ಳಿ ಮಾತನಾಡಿ, ‘ಮಾತೃಭಕ್ತಿ, ಗುರುಭಕ್ತಿ, ದೇಶಭಕ್ತಿ ವಿದ್ಯಾರ್ಥಿಗಳಿಗೆ ಆಭರಣಗಳಿದ್ದಂತೆ. ವಿದ್ಯಾರ್ಥಿಗಳಿಗೆ ಅರಿವಿನ ದಾಸೋಹ ಮುಖ್ಯ’ ಎಂದರು.
ಲಿಂಗರಾಜ ರಾಮಾಪೂರ ಅವರ ಅರಳೀಕಟ್ಟೆ ಧ್ಯೇಯ ಗೀತೆಯನ್ನು ಬಿಡುಗಡೆಗೊಳಿಸಲಾಯಿತು.
ಮುಖ್ಯ ಶಿಕ್ಷಕ ಸುಮನ ತೇಲಂಗ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಸಂಜೀವ ತಿರ್ಲಾಪೂರ, ಹುಬ್ಬಳ್ಳಿ ಬಸವಕೇಂದ್ರದ ಅಧ್ಯಕ್ಷ ಜಿ.ಬಿ. ಹಳ್ಯಾಳ, ಸದಸ್ಯರಾದ ಕೆ.ಎಸ್. ಇನಾಮತಿ, ಶಿವಯೋಗಿ ಮೊರ್ಖಂಡಿ, ಪ್ರಭು ಅಂಗಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಎಸ್. ರಾಯನಗೌಡ್ರ, ಗಣ್ಯರಾದ ಮಂಜುನಾಥ ಹುಬ್ಬಳ್ಳಿ, ಸೋಮಣ್ಣ ಕಮಡೊಳ್ಳಿ, ಜಿ.ಪಿ. ಪ್ರಭುಸ್ವಾಮಿಮಠ, ಶಂಕ್ರೆಮ್ಮ ಚೆನ್ನಪ್ಪಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.