ಧಾರವಾಡ: ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ ಗುರುವಾರ ಹೂವು-ಹಣ್ಣು, ಪೂಜಾ ಸಾಮಗ್ರಿ, ದಿನಸಿ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿ ಜೋರಾಗಿತ್ತು.
ಸುಭಾಷ ರಸ್ತೆ, ಸಿಬಿಟಿ, ಅಕ್ಕಿಪೇಟೆ, ಸೂಪರ್ ಮಾರುಕಟ್ಟೆಯಲ್ಲಿ ಜನರು ಬೆಳಿಗ್ಗೆಯೇ ಜಮಾಯಿಸಿದ್ದರು. ಸುಭಾಷ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚು ಇತ್ತು. ರಸ್ತೆ ಬದಿಗಳಲ್ಲಿ ಹೂವು, ಬಾಳೆಗಿಡ, ಮಾವಿನ ಎಲೆ ಮಾರಾಟ ನಡೆಯಿತು.
ಹಬ್ಬದ ದಿನ ಮನೆಗಳಲ್ಲಿ ಲಕ್ಷ್ಮೀ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಪೂಜಾ ಕೈಂಕರ್ಯಕ್ಕೆ ಹಣ್ಣು, ಹೂವು ಖರೀದಿಸಿದರು. ಹೂವು ಮತ್ತು ಹಣ್ಣಿನ ದರಗಳಲ್ಲಿ ಏರಿಕೆಯಾಗಿದೆ.
ಹೂವಿನ ದರ ದುಬಾರಿಯಾಗಿತ್ತು. ಕನಕಾಂಬರ ದರ ಕೆ.ಜಿ.ಗೆ ₹300, ಮಲ್ಲಿಗೆ ₹ 1200 ರಿಂದ ₹ 1,800, ಸೇವಂತಿಗೆ ₹240 ರಿಂದ ₹300, ಗುಲಾಬಿ ₹ 210 ರಿಂದ ₹ 250, ಸುಗಂಧರಾಜ ₹ 360, ಚೆಂಡು ಹೂವು ₹40 ರಿಂದ ₹ 80, ಬಾಳೆ ಗಿಡ ಎರಡಕ್ಕೆ ₹ 80 ರಂತೆ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ವರಮಹಾಲಕ್ಷ್ಮೀ ಹಬ್ಬದಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚು ಇರುತ್ತದೆ. ಪೂಜೆಗೆ ಮೂರ್ತಿಯ ಸುತ್ತ ಜೋಡಿಸಲು ಮತ್ತು ಅಲಂಕಾರಕ್ಕಾಗಿ ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಖರೀದಿಸುತ್ತಾರೆ. ಬೇಡಿಕೆ ಹೆಚ್ಚಾದಂತೆ ಹಣ್ಣುಗಳ ದರದಲ್ಲೂ ಸ್ವಲ್ಪ ಏರಿಕೆಯಾಗಿದೆ ಎಂದು ಹಣ್ಣಿನ ವ್ಯಾಪಾರಿ ಸಮೀರ್ ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹಬ್ಬಗಳಲ್ಲಿ ಹೂವಿನ ದರ ಹೆಚ್ಚಾಗುವುದು ಸಾಮಾನ್ಯ. ಅಲಂಕಾರಕ್ಕೆ ಹೆಚ್ಚು ಹೂವು ಬಳಸುವುದರಿಂದ ದರ ಹೆಚ್ಚಾಗುತ್ತದೆ. ಗ್ರಾಹಕರು ಹೂವು ಒಯ್ಯುತ್ತಾರೆನೌಶಾದ್ ಅಕ್ತಾರ ವ್ಯಾಪಾರಿ
ಎರಡು ದಿನದ ಹಿಂದೆ ಹೂವು ಹಣ್ಣಿನ ಬೆಲೆ ಕಡಿಮೆ ಇತ್ತು. ಈಗ ಹಬ್ಬ ಇರುವುದರಿಂದ ಹೂವಿನ ಬೆಲೆ ದುಪ್ಪಟ್ಟಾಗಿದೆನೇಹಾ ಬಿ.ಎನ್ ಧಾರವಾಡ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.