ADVERTISEMENT

ಪಾರ್ಕಿಂಗ್ ಶುಲ್ಕ ಸಂಗ್ರಹ ಆರಂಭ

ಎಂಟು ಪ್ಯಾಕೇಜ್‌ಗಳಲ್ಲಿ ₹2.97 ಕೋಟಿ ಮೊತ್ತದ ಟೆಂಡರ್‌

ಸತೀಶ ಬಿ.
Published 25 ಜೂನ್ 2025, 5:49 IST
Last Updated 25 ಜೂನ್ 2025, 5:49 IST
ಹುಬ್ಬಳ್ಳಿಯ ಕೊಪ್ಪಿಕರ್‌ ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ಕಾರಿಗೆ ಸಿಬ್ಬಂದಿ ಪಾರ್ಕಿಂಗ್ ಶುಲ್ಕದ ರಶೀದಿ ಅಂಟಿಸಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಕೊಪ್ಪಿಕರ್‌ ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ಕಾರಿಗೆ ಸಿಬ್ಬಂದಿ ಪಾರ್ಕಿಂಗ್ ಶುಲ್ಕದ ರಶೀದಿ ಅಂಟಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಹಾಗೂ ಆದಾಯಕ್ಕಾಗಿ ಮಹಾನಗರ ಪಾಲಿಕೆಯು ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಟೆಂಡರ್‌ ಕರೆದಿದೆ.

ಒಟ್ಟು ಎಂಟು ಪ್ಯಾಕೇಜ್‌ಗಳಲ್ಲಿ ₹2.97 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿದೆ. ಅದರಲ್ಲಿ ಪ್ಯಾಕೇಜ್‌ –2 (ಧಾರವಾಡ), ಪ್ಯಾಕೇಜ್‌–8ಕ್ಕೆ (ಹುಬ್ಬಳ್ಳಿ) ಮಾತ್ರ ಟೆಂಡರ್‌ ಪಡೆದಿದ್ದಾರೆ. ಅದರಲ್ಲಿ ಪ್ಯಾಕೇಜ್‌–8ಕ್ಕೆ ಶುಲ್ಕ ಸಂಗ್ರಹಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ.

ಪಾರ್ಕಿಂಗ್‌ಗೆ ಒಟ್ಟು 144 ಸ್ಥಳಗಳನ್ನು ಗುರುತಿಸಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ ಸಮಯ ಆಧರಿಸಿ ₹10ರಿಂದ ₹20 ಮತ್ತು ದ್ವಿಚಕ್ರ ವಾಹನಗಳಿಗೆ ₹5ರಿಂದ ₹10 ಶುಲ್ಕ ನಿಗದಿಪಡಿಸಲಾಗಿದೆ.

ADVERTISEMENT

ಈಗಾಗಲೇ ಶುಲ್ಕ ಸಂಗ್ರಹಿಸಲು ಕಾರ್ಯಾದೇಶ ನೀಡಿರುವ ಪ್ಯಾಕೇಜ್ 8ರಲ್ಲಿ ವಾಹನ ನಿ‌ಲುಗಡೆಗೆ 33 ಸ್ಥಳಗಳನ್ನು ಗುರುತಿಸಲಾಗಿದ್ದು, ₹41.16 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ.

ದಾಜಿಬಾನಪೇಟೆ ರಸ್ತೆ, ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ಬ್ರಾಡ್‌ವೇ, ದುರ್ಗದಬೈಲ್‌, ಬೆಳಗಾಂವ ಗಲ್ಲಿ, ಜವಳಿ ಸಾಲು, ಪೆಂಡಾರ ಗಲ್ಲಿ, ಕಾಳಮ್ಮನ ಅಗಸಿ, ಕುಬಸದ ಗಲ್ಲಿ, ಮೂರು ಸಾವಿರ ಮಠ, ಹರಪನಹಳ್ಳಿ ರಸ್ತೆ, ವಿಕ್ಟೋರಿಯಾ ರಸ್ತೆ, ಅಂಚಟಗೇರಿ ಓಣಿಗಳಲ್ಲಿ ದಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ರಸ್ತೆಯ ಎಡ ಅಥವಾ ಬಲ ಭಾಗದಲ್ಲಿ ನಿಲುಗಡೆಗೆ ಸ್ಥಳ ಗುರುತು ಮಾಡಲಾಗಿದೆ.

ನಗರದ ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಇರುವ ದರವನ್ನು ಆದರಿಸಿ ಸಾರ್ವಜನಿಕರಿಗೆ ಹೊರೆಯಾಗದಂತೆ ಇಲ್ಲಿ ಶುಲ್ಕ ನಿಗದಿಪಡಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಅಶೋಕ ಗುರಾಣಿ, ‘ಪ್ಯಾಕೇಜ್‌ 8ಕ್ಕೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಮೇ 13ರಂದು ಕಾರ್ಯಾದೇಶ ನೀಡಲಾಗಿದೆ. ಪ್ಯಾಕೇಜ್ 2ಕ್ಕೆ ಶೀಘ್ರ ಕಾರ್ಯಾದೇಶ ನೀಡಲಾಗುವುದು’ ಎಂದರು.

‘ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗುವ ಜತೆಗೆ ದಟ್ಟಣೆ ಉಂಟಾಗುತ್ತಿತ್ತು. ಅದನ್ನು ತಪ್ಪಿಸಲು ವಾಹನ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ಅಲ್ಲದೆ, ಇದರಿಂದ ಪಾಲಿಕೆಗೆ ಆದಾಯ ಸಹ ಬರುತ್ತದೆ’ ಎಂದು ತಿಳಿಸಿದರು.

ಪಾಲಿಕೆ ನಿಗದಿಪಡಿಸಿದ ಮೊತ್ತದಷ್ಟು ಪಾರ್ಕಿಂಗ್ ಶುಲ್ಕ ಸಂಗ್ರಹವಾಗುವುದಿಲ್ಲ ಎಂದು ಕೆಲವು ಪ್ಯಾಕೇಜ್‌ಗಳಿಗೆ ಟೆಂಡರ್ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಲು ಪೇಯ್ಡ್‌ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ
ರುದ್ರೇಶ ಘಾಳಿ ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

- ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ವಿರೋಧ

ವಾಣಿಜ್ಯ ಮಳಿಗೆಗಳು ಮಾಲ್‌ಗಳಲ್ಲಿ ಪಾರ್ಕಿಂಗ್‌ಗೆ ಯಾವುದೇ ಶುಲ್ಕ ಪಡೆಯಬಾರದು ಎಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ. ಪಾರ್ಕಿಂಗ್‌ಗೆ ಜಾಗ ಬಿಡದಿದ್ದರೂ ಕೆಲವೊಂದು ವಾಣಿಜ್ಯ ಸಂಕೀರ್ಣಗಳಿಗೆ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ಆ ಬಗ್ಗೆ ಕ್ರಮ ಕೈಗೊಳ್ಳದೆ ಪಾಲಿಕೆಯಿಂದ ಈಗ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ವಾಹನ ಸವಾರರೊಬ್ಬರು ದೂರಿದರು. ಪಾರ್ಕಿಂಗ್ ಉದ್ದೇಶಕ್ಕೆ ಬಿಟ್ಟ ಜಾಗವನ್ನು ಸಹ ಅತಿಕ್ರಮಣ ಮಾಡಿಕೊಂಡು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಮೊದಲು ಇದನ್ನು ತೆರವು ಮಾಡಬೇಕು. ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದು ಕೈಬಿಡಬೇಕು ಎಂದು ಕಾರು ಚಾಲಕರೊಬ್ಬರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.