ADVERTISEMENT

ನಿರ್ವಾತ ಸೃಷ್ಟಿಸಿದ ಚೆಂಬೆಳಕಿನ ಕವಿಯ ಅಗಲಿಕೆ

ನೆಚ್ಚಿನ ಕವಿಗೆ ಅಭಿಮಾನಿಗಳ ಭಾವಪೂರ್ಣ ವಿದಾಯ; ಅನುರಣಿಸಿದ ಕಣವಿ ಗೀತೆಗಳು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 3:59 IST
Last Updated 17 ಫೆಬ್ರುವರಿ 2022, 3:59 IST
ಧಾರವಾಡದ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್‌ನಲ್ಲಿ ಕವಿ ಡಾ. ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು  –ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ
ಧಾರವಾಡದ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್‌ನಲ್ಲಿ ಕವಿ ಡಾ. ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು  –ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ   

ಧಾರವಾಡ: ತಮ್ಮ ಬದುಕು ಹಾಗೂ ಬರವಣಿಗೆ ಎರಡರಲ್ಲೂ ಚೆಂಬೆಳಕು ಚೆಲ್ಲಿದವರು ಡಾ. ಚೆನ್ನವೀರ ಕಣವಿ. ಹಾಗಾಗಿಯೇ ಅವರು ಸಾಹಿತ್ಯ ಲೋಕದಲ್ಲಿ ಚೆಂಬೆಳಕಿನ ಕವಿ ಎಂದೇ ಖ್ಯಾತರು. ಕಣವಿ ಅವರ ಅಗಲಿಕೆಯು ಸಾಹಿತ್ಯದ ಪರಂಪರೆ ಹಾಗೂ ತಲೆಮಾರುಗಳ ಕೊಂಡಿ ಕಳಚಿದೆ.ಕವಿಗಳ ಬೀಡಾದ ಧಾರವಾಡದ ಹೆಮ್ಮೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದ ಕಣವಿ ಅವರ ಅಗಲಿಕೆ, ವಿದ್ಯಾಕಾಶಿಯಲ್ಲಿ ದೊಡ್ಡ ನಿರ್ವಾತ ಸೃಷ್ಟಿಸಿದೆ.

ಬೆಳಿಗ್ಗೆ 9.30ರ ಸುಮಾರಿಗೆ ನಿಧನರಾದ ಕಣವಿ ಅವರ ಪಾರ್ಥಿವ ಶರೀರವನ್ನು ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ನಿವಾಸಕ್ಕೆ ಬೆಳಿಗ್ಗೆ 11.30ರ ಸುಮಾರಿಗೆ ತರಲಾಯಿತು. ವಿಷಯ ತಿಳಿಯುತ್ತಿದ್ದಂತೆಯೆ ಸಾಹಿತಿಗಳು, ಆಪ್ತರು, ಅಭಿಮಾನಿಗಳು, ವಿದ್ಯಾರ್ಥಿಗಳು ನಿವಾಸಕ್ಕೆ ತೆರಳಿ ತಮ್ಮ ನೆಚ್ಚಿನ ಕವಿಯ ಅಂತಿಮ ದರ್ಶನ ಪಡೆದರು.ಗುಂಪೊಂದು ಕಣವಿ ರಚಿತ ಭಾವಗೀತೆಗಳನ್ನು ಹಾಡಿ ಗೀತ ನಮನ ಸಲ್ಲಿಸಿತು.ಮಧ್ಯಾಹ್ನ 3.30ರ ಸುಮಾರಿಗೆ ಕರ್ನಾಟಕ ಕಾಲೇಜಿನ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರ ಇಡಲಾಗಿತ್ತು.

ಸಾಹಿತಿಗಳಾದ ಡಾ. ಗುರುಲಿಂಗ ಕಾಪಸೆ, ಜಿ.ಎನ್. ದೇವಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ, ಮನೋಹರ ಗ್ರಂಥಮಾಲದ ಸಮೀರ ಜೋಶಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎಸ್ಪಿ ಪಿ. ಕೃಷ್ಣಕಾಂತ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ADVERTISEMENT

ಸಂಜೆ 5ರ ಸುಮಾರಿಗೆ ಕರ್ನಾಟಕ ಕಾಲೇಜಿನಿಂದ ಕಣವಿ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅಳ್ನಾವರ ರಸ್ತೆಯಲ್ಲಿರುವ ಅವರ ಸೃಷ್ಟಿ ಫಾರ್ಮ್‌ನಲ್ಲಿ ಕೊಂಡೊಯ್ದು ಅಂತ್ಯಕ್ರಿಯೆ ಮಾಡಲಾಯಿತು. ಸಂಜೆ ಸೂರ್ಯ ಹೊಂಬೆಳಕು ಸೂಸುತ್ತಾ ಮರೆಯಾಗುತ್ತಿದ್ದಂತೆ, ಇತ್ತ ಚೆಂಬಳಕಿನ ಕವಿ ಚೆನ್ನವೀರ ಕಣವಿಗೆ ಅವರಿಗೆ ಎಲ್ಲರೂ ಭಾವಪೂರ್ಣ ವಿದಾಯ ಹೇಳಿದರು.

ಕಣವಿ ಎಂದರೆ ಜೀವನೋತ್ಸಾಹ. ಅವರು ಮಾತುಗಳೂ ಅಷ್ಟೇ ಮಧುರ. ಎದುರಿಗಿದ್ದವರ ಮೊಗದಲ್ಲಿ ಪ್ರೀತಿಯ ನಗು ತರಿಸುತ್ತಿದ್ದವು. ಹಾಗಾಗಿಯೇ ಮಕ್ಕಳಿದಿಂದಿಡಿದು ಹಿರಿಯರವರೆಗೂ ಅವರು ನೆಚ್ಚಿನ ಕವಿಯಾಗಿದ್ದರು. ಅವರು ಭೌತಿಕವಾಗಿ ಅಗಲಿರಬಹುದು. ಆದರೆ, ಅವರ ಕವಿತೆಗಳು ಹಾಗೂ ಆದರ್ಶ ಬದುಕು ನಮ್ಮೊಂದಿಗೆ ಸದಾ ಇರುತ್ತದೆ ಎನ್ನುವುದು ಅವರ ಅಭಿಮಾನಿಗಳ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.