ADVERTISEMENT

ಸೆಪಕ್ ಟಕ್ರಾ | ವಿಕಾಸ ಭರವಸೆ: ರಾಷ್ಟ್ರಮಟ್ಟದಲ್ಲಿ ಸಾಧನೆಯ ಗುರಿ

ಸತೀಶ ಬಿ.
Published 28 ಜೂನ್ 2025, 5:01 IST
Last Updated 28 ಜೂನ್ 2025, 5:01 IST
ವಿಕಾಸ್ ವಾಲಿಕಾರ
ವಿಕಾಸ್ ವಾಲಿಕಾರ   

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯವಾಗುತ್ತಿರುವ ಸೆಪಕ್ ಟಕ್ರಾ ಕ್ರೀಡೆಯಲ್ಲಿ ವಿಕಾಸ್ ವಾಲಿಕಾರ ಭರವಸೆ ಮೂಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲದ ವಿಕಾಸ್‌, ಸದ್ಯ ಧಾರವಾಡದ ಕ್ಲಾಸಿಕ್ ಪದವಿ ಕಾಲೇಜಿನಲ್ಲಿ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ.

ಈಚೆಗೆ ನಡೆದ ಖೇಲೊ ಇಂಡಿಯಾ ಕ್ರೀಡಾಕೂಟದ ಸೆಪಕ್‌ ಟಕ್ರಾ ಸ್ಪರ್ಧೆಯ ಕ್ವಾಡ್ರಂಟ್‌ ವಿಭಾಗದಲ್ಲಿ ವಿಕಾಸ್ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. 2023ರಲ್ಲಿ ದಾವಣಗೆರೆಯಲ್ಲಿ ನಡೆದ 11 ಸೆಪಕ್‌ ಟಕ್ರಾ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ರೆಗು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 2022ರಲ್ಲಿ ದಾವಣಗೆರೆಯಲ್ಲಿ ನಡೆದ 10ನೇ ಸೆಪಕ್‌ ಟಕ್ರಾ ರಾಜ್ಯ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ADVERTISEMENT

ಭಾರತ ಸೆಪಕ್ ಟಕ್ರಾ ಫೆಡರೇಷನ್‌ನಿಂದ ಬಿಹಾರದ ಪಟ್ನಾದಲ್ಲಿ 2022ರಲ್ಲಿ ನಡೆದ 26ನೇ ಜ್ಯೂನಿಯರ್ ನ್ಯಾಷನಲ್‌ ಸೆಪಕ್‌ ಟಕ್ರಾ ಚಾಂಪಿಯನ್‌ಷಿಪ್‌, 2023ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ 33ನೇ ಸೀನಿಯರ್ ನ್ಯಾಷನಲ್ ಸೆಪಕ್‌ ಟಕ್ರಾ ಚಾಂಪಿಯನ್‌ಷಿಪ್‌ನಲ್ಲಿ ವಿಕಾಸ ಭಾಗವಹಿಸಿದ್ದರು.

‘ಎಂಟನೇ ತರಗತಿಗೆ ಬೆಳಗಾವಿ ಜಿಲ್ಲೆಯ ಚಂದರಗಿಯಲ್ಲಿರುವ ಕ್ರೀಡಾ ಶಾಲೆಗೆ ಸೇರಿದೆ. ಸೆಪಕ್ ಟಕ್ರಾ ವಿನೂತನ ಕ್ರೀಡೆಯಾಗಿದ್ದರಿಂದ ಇದರಲ್ಲಿ ಆಸಕ್ತಿ ಮೂಡಿತು. ಲಕ್ಷ್ಮಣ ಲಮಾಣಿ ಅವರು ನನಗೆ ತರಬೇತಿ ನೀಡಿದರು’ ಎಂದು ವಿಕಾಸ್‌ ಹೇಳಿದರು.

‘ಅಕ್ಟೋಬರ್‌ನಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ ಇದೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಓದಿನ ಜತೆಗೆ ಪ್ರತಿ ದಿನ ನಾಲ್ಕು ಗಂಟೆ ಅಭ್ಯಾಸ ನಡೆಸುತ್ತೇನೆ’ ಎಂದರು.

‘ವಾಲಿಬಾಲ್‌ ಕ್ರೀಡೆಯಲ್ಲಿ ಚೆಂಡನ್ನು ಕೈಯಿಂದ ಹೊಡೆದರೆ ಸೆಪಕ್‌ ಟಕ್ರಾದಲ್ಲಿ ಚೆಂಡನ್ನು ಕಾಲಿನಿಂದ ಒದೆಯಲಾಗುತ್ತದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಕ್ರೀಡೆ ಸೇರ್ಪಡೆಯಾಗಿದೆ. ಈ ಭಾಗದ ಅನೇಕ ಕ್ರೀಡಾಪಟುಗಳು ಇದರಲ್ಲಿ ಸಾಧನೆ ಮಾಡುತ್ತಿರುವುದು ಖುಷಿಯ ವಿಚಾರ’ ಎಂದು ಕರ್ನಾಟಕ ಅಮೆಚೂರ್‌ ಸೆಪಕ್‌ ಟಕ್ರಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಪಿ.ಮಂಜುನಾಥ ಹೇಳಿದರು.

ವಿಕಾಸ್ ವಾಲಿಕಾರ
ರಾಷ್ಟ್ರಮಟ್ಟದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಆ ನಿಟ್ಟಿನಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ
ವಿಕಾಸಗೆ ಉತ್ತಮ ಭವಿಷ್ಯ ಇದ್ದು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಇದೆ. ಸರ್ಕಾರದಿಂದಲೂ ಪ್ರೋತ್ಸಾಹ ಸಿಗಬೇಕು
ಪಿ.ಮಂಜುನಾಥ್ ಜಂಟಿ ಕಾರ್ಯದರ್ಶಿ ಕರ್ನಾಟಕ ಅಮೆಚೂರ್‌ ಸೆಪಕ್‌ ಟಕ್ರಾ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.