ADVERTISEMENT

ಮತ ಬೇಟೆಯಲ್ಲಿ ಗೌಣವಾದ ಸಮಸ್ಯೆಗಳು

ಕಾವು ಪಡೆದುಕೊಳ್ಳುತ್ತಿರುವ ಪಟ್ಟಣ ಪಂಚಾಯ್ತಿ ಚುನಾವಣೆ

ಬಸವರಾಜ ಹವಾಲ್ದಾರ
Published 9 ನವೆಂಬರ್ 2019, 10:13 IST
Last Updated 9 ನವೆಂಬರ್ 2019, 10:13 IST
ಕುಂದಗೋಳದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಬೆಳೆದಿರುವ ಕಸ ಹಾಗೂ ತ್ಯಾಜ್ಯ ವಸ್ತುಗಳುಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್
ಕುಂದಗೋಳದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಬೆಳೆದಿರುವ ಕಸ ಹಾಗೂ ತ್ಯಾಜ್ಯ ವಸ್ತುಗಳುಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್   

ಕುಂದಗೋಳ: ಪಟ್ಟಣದ ಕೆಲವು ಕಡೆ ಉತ್ತಮ ರಸ್ತೆಗಳಿವೆ, ಚರಂಡಿ ನಿರ್ಮಿಸಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ಅವು ಕಸದಿಂದ ತುಂಬಿದ್ದು, ನೀರು ಹರಿದು ಮುಂದೆ ಹೋಗುವುದಿಲ್ಲ. ಕೆಲವು ಪ್ರದೇಶಗಳಲ್ಲಿ ರಸ್ತೆಯೂ ಇಲ್ಲ, ಚರಂಡಿಯೂ ಇಲ್ಲ.

ಇದು ಪಟ್ಟಣದಲ್ಲಿ ಸಂಚರಿಸಿದಾಗ ಕಂಡು ಬಂದ ದೃಶ್ಯ. ಖಾಲಿ ಜಾಗಗಳಲ್ಲಿಯೂ ಸಾಕಷ್ಟು ಕಡೆಗಳಲ್ಲಿ ಕಸ ಬಿದ್ದಿದೆ. ಕಸದ ಗಿಡಗಳು ಬೆಳೆದು ನಿಂತಿವೆ. ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗಿಲ್ಲ.

ಪಟ್ಟಣ ಪಂಚಾಯ್ತಿಯ ಚುನಾವಣೆಯ ಕಾವು ಜೋರಾಗಿದೆ. ಅಭ್ಯರ್ಥಿಗಳು, ಪಕ್ಷದ ಮುಖಂಡರುಗಳು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದರೆ, ಯಾರೂ ಸಮಸ್ಯೆಯ ಪರಿಹಾರದ ಬಗೆಗೆ ಚಕಾರವೆತ್ತುತ್ತಿಲ್ಲ. ಸಮಸ್ಯೆಗಳ ಪರಿಹಾರದ ಮಾತುಗಳು ಹಿಂದೆ ಸರಿದಿದ್ದು, ಮತ ಸೆಳೆಯುವ ತಂತ್ರಗಳೇ ಮುಂಚೂಣಿಗೆ ಬಂದಿವೆ.

ADVERTISEMENT

ಆಶ್ರಯ ಕಾಲೊನಿ ಡಾಂಬರು ರಸ್ತೆ ಕಂಡಿದೆ. ಚರಂಡಿಯೂ ನಿರ್ಮಿಸಿದ್ದಾರೆ. ಆದರೆ, ಕಸ ವಿಲೇವಾರಿ ಸರಿಯಾಗಿಲ್ಲ ಎಂಬ ದೂರು ಅಲ್ಲಿನ ಜನರದ್ದಾಗಿದೆ. ‘ಕಾಲೊನಿಯಲ್ಲಿ ಸೌಲಭ್ಯಗಳು ಪರವಾಗಿಲ್ಲ. ಆದರೆ, ಇಲ್ಲಿಯವರೆಗೆ ಕೆಲವರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಬಹುತೇಕರಿಗೆ ನೀಡಿಲ್ಲ. ಹಕ್ಕು ಪತ್ರಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜವಾಗಿಲ್ಲ’ ಎನ್ನುತ್ತಾರೆ ಅಲ್ಲಿನ ನಿವಾಸಿ ಈರಣ್ಣ ಸಜ್ಜನ.

ಮೌನೇಶ್ವರ ಪ್ಲಾಟ್‌ನಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಇತ್ತೀಚೆಗೆ ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಹಾಕಲಾಗಿದೆ. ಅದಕ್ಕಾಗಿ ರಸ್ತೆ ಅಗೆಯಲಾಗಿದೆ. ಹಾಗಾಗಿ, ಅಲ್ಲಲ್ಲಿ ತೆಗ್ಗುಗಳು ಬಿದ್ದಿವೆ.

ಇತ್ತೀಚೆಗೆ ಮಳೆ ಸುರಿದಾಗ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದ್ದರಿಂದ ಮನೆಗಳಿಗೆ ನೀರು ನುಗ್ಗಿತ್ತು. ಚರಂಡಿಯನ್ನೇ ಒಡೆದು ನೀರು ಹೋಗಲು ವ್ಯವಸ್ಥೆ ಮಾಡಲಾಗಿದೆ.

ಪಟ್ಟಣದ ಹಳೆಯ ಪ್ರದೇಶಗಳಲ್ಲಿ ಕುಂಬಾರ ಓಣಿಯೂ ಒಂದು. ಆದರೆ, ಅಲ್ಲಿಯ ರಸ್ತೆಗಳು ಇಲ್ಲಿಯವರೆಗೆ ಡಾಂಬರನ್ನೇ ಕಂಡಿಲ್ಲ. ಚರಂಡಿ ದೂರದ ಮಾತೇ ಆಗಿದೆ. ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೆಸರಿನಲ್ಲಿಯೇ ಜನರು ತಿರುಗಾಡುವಂತಾಗಿತ್ತು. ರಸ್ತೆ ಮಾರ್ಗದಲ್ಲಿ ಕಸ ಬೆಳೆದಿದ್ದು, ಅದರ ನಡುವೆಯೇ ಜನರು ತಿರುಗಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.