ADVERTISEMENT

ಮತದಾನ ಪ್ರಜಾತಂತ್ರದ ಉಸಿರಾಟದಂತೆ: ಉಮೇಶ ಎಂ. ಅಡಿಗ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:43 IST
Last Updated 26 ಜನವರಿ 2022, 3:43 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರು ಅಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು
ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರು ಅಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು   

ಧಾರವಾಡ: ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ಉಸಿರಾಟದಷ್ಟೇ ಮುಖ್ಯ. ಇದನ್ನು ಕೇವಲ ಹಕ್ಕು ಎಂದು ಭಾವಿಸದೇ ಕರ್ತವ್ಯವಾಗಿ ನಿರ್ವಹಿಸಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ನ್ಯಾಯಾಧೀಶ ಉಮೇಶ ಎಂ. ಅಡಿಗ ಹೇಳಿದರು.

ಕೇಂದ್ರ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಮಂಗಳವಾರ ವರ್ಚ್ಯುಯಲ್ ವೇದಿಕೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಜನಪ್ರತಿನಿಧಿಗಳನ್ನು ಚುನಾಯಿಸುವಾಗ ನಿಸ್ವಾರ್ಥ ಹಾಗೂ ಉತ್ತಮ ಮನೋಭಾವ ಹೊಂದಿದವರನ್ನು ನಿಷ್ಪಕ್ಷಪಾತವಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೇ ಆಯ್ಕೆ ಮಾಡಬೇಕು‘ ಎಂದರು.

ADVERTISEMENT

‘ಮತದಾನದ ಕುರಿತು ಯಾರೊಬ್ಬರೂ ಅಸಡ್ಡೆ, ನಿರ್ಲಕ್ಷ್ಯ ತೋರಬಾರದು. ಮತದಾರರ ದಿನದಂದು ನಾವು ಸ್ವೀಕರಿಸುವ ಪ್ರತಿಜ್ಞೆ ಅರ್ಥಪೂರ್ಣವಾಗಿದ್ದು, ಅದನ್ನು ಮನಃಪೂರ್ವಕವಾಗಿ ಆಚರಣೆಗೆ ತರಬೇಕು’ ಎಂದರು.

ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಮಾತನಾಡಿ, ‘ನಿರ್ಭೀತರಾಗಿ ಧರ್ಮ, ಜಾತಿ, ಭಾಷೆ ಇನ್ನಿತರ ಪ್ರೇರಣೆ, ದಾಕ್ಷಿಣ್ಯಗಳಿಗೆ ಒಳಗಾಗದೇ ಮತ ಚಲಾಯಿಸಬೇಕು. 2021ರ ಜನವರಿಯಲ್ಲಿ ಜಿಲ್ಲೆಯಲ್ಲಿ 15,40,041 ಮತದಾರರು ಇದ್ದರು. ಈಗ 15,48,641ಕ್ಕೆ ಏರಿಕೆಯಾಗಿದೆ. 18 ರಿಂದ 19 ವಯೋಮಾನದ 4,725 ಯುವಕರು ಹಾಗೂ 3258 ಯುವತಿಯರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 15.48ಲಕ್ಷ ಮತದಾರರು ಇದ್ದಾರೆ. ಮತದಾರರ ಸಹಾಯವಾಣಿ, ಮೊಬೈಲ್ ಆ್ಯಪ್‌ಗಳ ಮೂಲಕ ಮತದಾರರ ನೋಂದಣಿ ಕಾರ್ಯ ಸರಳೀಕರಿಸಿದೆ. ಇದಕ್ಕಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿದೆ’ ಎಂದರು.

ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸುಶೀಲಾ, ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ, ನ್ಯಾಯಾಧೀಶರಾದ ಸಂಜಯ ಗುಡಗುಡಿ, ಸಿ.ಎಂ.ಪುಷ್ಪಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಟಿ.ಹನುಮಂತಪ್ಪ, ಚುನಾವಣಾ ತಹಶೀಲ್ದಾರ್ ಎಚ್.ಎನ್.ಬಡಿಗೇರ ಇದ್ದರು.

ರಾಜ್ಯದ ಅತ್ಯುತ್ತಮ ಮತದಾರರ ಸಾಕ್ಷರತಾ ಸಂಘಗಳ ಪ್ರಶಸ್ತಿಗೆ ಭಾಜನರಾದ ನವಲಗುಂದ ತಾಲ್ಲೂಕಿನ ಚಿಲಕವಾಡದ ಕೋನರಡ್ಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಾ. ಪ್ರಭಾಕರ ಎಸ್.ಲಗಮಣ್ಣವರ ಹಾಗೂ ಶಿಕ್ಷಕರಿಗೆ ಉಪವಿಭಾಗಾಧಿಕಾರಿ ಅಶೋಕ ತೇಲಿ ಪ್ರಶಸ್ತಿ ನೀಡಿ ಗೌರವಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.