ADVERTISEMENT

ಹುಬ್ಬಳ್ಳಿ: ‘ವನ್ಯಜೀವಿಗಳಿಗಾಗಿ ನಡಿಗೆ’ 3ಕ್ಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 11:23 IST
Last Updated 30 ಸೆಪ್ಟೆಂಬರ್ 2019, 11:23 IST
   

ಹುಬ್ಬಳ್ಳಿ: ‘65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ, ಧಾರವಾಡ ಅರಣ್ಯ ವಿಭಾಗವು ವನ್ಯಜೀವಿಗಳ ಸಂರಕ್ಷಣೆ ಮತ್ತು ಉಳಿವಿಗಾಗಿ ಅ. 3ರಂದು ಹುಬ್ಬಳ್ಳಿಯಲ್ಲಿ ವನ್ಯಜೀವಿಗಳಿಗಾಗಿ ನಡಿಗೆ, ವನ್ಯಜೀವಿ ವೇಷಭೂಷಣ ಸ್ಪರ್ಧೆ ಹಾಗೂ 4ರಂದು ಧಾರವಾಡದಲ್ಲಿ ಚರ್ಚೆ, ವನ್ಯಜೀವಿ ಸಾಕ್ಷ್ಯಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ್ ಹೇಳಿದರು.

‘3ರಂದು ಬೆಳಿಗ್ಗೆ 6 ಗಂಟೆಗೆ ವಿದ್ಯಾನಗರದ ಕೆಎಲ್ಇ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವನ್ಯಜೀವಿಗಳಿಗಾಗಿ ನಡಿಗೆ ಪ್ರಾರಂಭವಾಗಲಿದೆ. ಅಲ್ಲಿಂದ ಹೊಸೂರು ಬಿಆರ್‌ಟಿಎಸ್ ಪ್ರಾದೇಶಿಕ ನಿಲ್ದಾಣದವರೆಗೆ ಸಾಗಿ, ಮತ್ತೆ ಬಿವಿಬಿ ಕಾಲೇಜು ತಲುಪಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಡದ ಸೃಜನಾ ರಂಗಮಂದಿರದಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತು ಚರ್ಚೆ, ಸಾಕ್ಷ್ಯಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನ 4ರಂದು ಬೆಳಿಗ್ಗೆ 10.30ಕ್ಕೆ ಜರುಗಲಿದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು’ ಎಂದರು.

ADVERTISEMENT

‘ಕಾರ್ಯಕ್ರಮಗಳಿಗೆ ಗುಂಗರಗಟ್ಟಿಯ ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಕೆ.ಎಲ್.ಇ ತಾಂತ್ರಿಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ನೇಚರ್ ಫಸ್ಟ್‌ ಇಕೋ ವಿಲೇಜ್, ಹುಬ್ಬಳ್ಳಿ ಫಿಟ್‌ನೆಸ್ ಕ್ಲಬ್, ಬ್ರೈನ್ ಲಿಫ್ಟ್ ಟೆಕ್ನಾಲಜೀಸ್‌, ಎವೋಲ್ವ್ ಲೈವ್ಸ್ ಫೌಂಡೇಷನ್, ಶ್ರೇಯಾ ಕಾಲೇಜು, ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಶನಲ್, ಧಾರವಾಡ ಬಾಂಡ್ಸ್, ರೋಟರಿ ಕ್ಲಬ್, ದಾನ ಉತ್ಸವ, ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ, ಕ್ಯೂರಿಯಸ್ ನ್ಯಾಚುರಲಿಸ್ಟ್ ಸೊಸೈಟಿ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ’ ಎಂದು ಹೇಳಿದರು.

ಮೃಗಾಲಯಕ್ಕೆ ಜಾಗ ಇದೆ:‘ಜಿಲ್ಲೆಯಲ್ಲಿ ಮೃಗಾಲಯ ಸ್ಥಾಪನೆಗೆ ಅಂಚಟಗೇರಿ ಮತ್ತು ಬಿಂಕದಕಟ್ಟೆಯಲ್ಲಿ 156 ಎಕರೆ ಅರಣ್ಯ ಪ್ರದೇಶವನ್ನು ಗುರುತಿಸಲಾಗಿದೆ. ಮೃಗಾಲಯ ಪ್ರಾಧಿಕಾರದವರು ಅನುಮತಿ ಕೊಟ್ಟರೆ, ಪ್ರಸ್ತಾವ ಕಳಿಸಲಾಗುವುದು. ಜಿಲ್ಲೆಯಲ್ಲಿ ಇತ್ತೀಚೆಗೆ ವನ್ಯಜೀವಿಗಳ ಭೇಟಿಯಾಡಿದ ಪ್ರಕರಣಗಳು ದಾಖಲಾಗಿತ್ತು. ಆದರೆ, ಉತ್ತರ ಕನ್ನಡ ಜಿಲ್ಲೆಯಿಂದ ಪ್ರಾಣಿಗಳ ಮಾಂಸ ತಂದು ಮಾರಾಟ ಮಾಡುವವರನ್ನು ಹಿಡಿದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಇಲಾಖೆ ವ್ಯಾಪ್ತಿಗೆ ಬೆಟ್ಟ:‘ಹುಬ್ಬಳ್ಳಿಯ ರಕ್ಷಿತಾರಣ್ಯವಾದ ನೃಪತುಂಗ ಬೆಟ್ಟವನ್ನು ಪಾಲಿಕೆ ಸೇರಿದಂತೆ ಕೆಲ ಸರ್ಕಾರೇತರ ಸಂಸ್ಥೆಗಳಿಗೆ ನೀಡಿದ ಭೋಗ್ಯದ ಅವಧಿ ಮುಗಿದಿದೆ. 74 ಎಕರೆಯ ಬೆಟ್ಟವನ್ನು ಮತ್ತೆ ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಲ್ಲಿ ಸದ್ಯ ಇರುವ ಚಟುವಟಿಕೆಗಳನ್ನು ಮುಂದುವರಿಸುವ ಜತೆಗೆ, ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು’ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಈಳಿಗೇರ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ವಿವಿಧ ಸಂಸ್ಥೆಗಳ ಪದಾಧಿಕಾರಿಗಳಾದ ಪಿ.ವಿ.ಹಿರೇಮಠ, ಓಟಿಲಿ ಅನ್ವನ್ ಕುಮಾರ್, ಹೇಮಂತ್, ಅಪೂರ್ವ ಕುಲಕರ್ಣಿ, ವಿವಿತ್, ವಿನಾಯಕ ಹಾಗೂ ಅಮೃತ ಇದ್ದರು.

‘ಶ್ರೀಗಂಧ ಕಳ್ಳರ ಹಾವಳಿಗೆ ತಡೆ’
‘ಧಾರವಾಡ ಅರಣ್ಯ ವಿಭಾಗದಲ್ಲಿ ಶ್ರೀಗಂಧ ಕಳ್ಳರ ಹಾವಳಿ ಹೆಚ್ಚಾಗಿದೆ. ಮುಂಚೆ ಸ್ಥಳೀಯರಷ್ಟೇ ಈ ಕೃತ್ಯ ಎಸಗು‌ತ್ತಿದ್ದರು. ಇದೀಗ ಮಧ್ಯಪ್ರದೇಶ ಸೇರಿದಂತೆ, ಹೊರ ರಾಜ್ಯಗಳ ಕಳ್ಳರೂ ಶ್ರೀಗಂಧ ಕದಿಯಲು ಇಲ್ಲಿಗೆ ಬರುತ್ತಿದ್ದಾರೆ. ಅಂತಹ ಒಂದು ತಂಡವನ್ನು 2017ರಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗೆ ಅವರಿಗೆ 5 ವರ್ಷ ಜೈಲು ಶಿಕ್ಷೆಯಾಗಿದೆ’ ಎಂದು ಡಿ. ಮಹೇಶ್ ಕುಮಾರ್ ಹೇಳಿದರು.

‘ಕಲಘಟಗಿಯಲ್ಲಿ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅದೇ ರೀತಿ ನೃಪತುಂಗ ಬೆಟ್ಟದಲ್ಲೂ ಕಳವು ಪ್ರಕರಣ ನಡೆದಿದೆ. ಹಾಗಾಗಿ, ಬೆಟ್ಟದಲ್ಲಿ ಭದ್ರತೆ ಹೆಚ್ಚಿಸಲಾಗಿದೆ’ ಎಂದರು.

ಒತ್ತುವರಿ ತೆರವು:‘ಜಿಲ್ಲೆಯಲ್ಲಿ 264 ಕುಟುಂಬಗಳಿಂದ 186 ಎಕರೆ ಅರಣ್ಯ ಒತ್ತುವರಿಯಾಗಿದ್ದು, ಈ ಸಂಬಂಧ 184 ಪ್ರಕರಣಗಳು ದಾಖಲಾಗಿವೆ. ಸರ್ಕಾರದ ಆದೇಶದ ಪ್ರಕಾರ, 3 ಎಕರೆಗಿಂತ ಕಡಿಮೆ ಒತ್ತುವರಿ ತೆರವು ಮಾಡಿಲ್ಲ. ಅದಕ್ಕೂ ಮೀರಿದ ಒತ್ತುವರಿ ತೆರವು ಮಾಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.