ADVERTISEMENT

‘ಅಂಬಿ ನಿಂ‌ಗ್‌ ವಯಸ್ಸಾಯ್ತೊ’ಕ್ಕೆ ಸಂಭ್ರಮದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 14:37 IST
Last Updated 27 ಸೆಪ್ಟೆಂಬರ್ 2018, 14:37 IST
ಹುಬ್ಬಳ್ಳಿಯ ಶ್ರೀಪದ್ಮಾ ಚಿತ್ರಮಂದಿರದ ಮುಂದೆ ಗುರುವಾರ ಡೊಳ್ಳು ಬಾರಿಸಿದ ಸುದೀಪ್‌ ಹಾಗೂ ಅಂಬರೀಶ್ ಅಭಿಮಾನಿಗಳು
ಹುಬ್ಬಳ್ಳಿಯ ಶ್ರೀಪದ್ಮಾ ಚಿತ್ರಮಂದಿರದ ಮುಂದೆ ಗುರುವಾರ ಡೊಳ್ಳು ಬಾರಿಸಿದ ಸುದೀಪ್‌ ಹಾಗೂ ಅಂಬರೀಶ್ ಅಭಿಮಾನಿಗಳು   

ಹುಬ್ಬಳ್ಳಿ: ಹಿರಿಯ ನಟ ಅಂಬರೀಶ್‌ ಮತ್ತು ಸುದೀಪ್‌ ಅಭಿನಯದ ‘ಅಂಬಿ ನಿಂಗ್‌ ವಯಸ್ಸಾಯ್ತೊ!’ ಚಿತ್ರಕ್ಕೆ ಅಭಿಮಾನಿಗಳು ವಾಣಿಜ್ಯ ನಗರಿಯಲ್ಲಿ ಭರ್ಜರಿ ಸ್ವಾಗತ ನೀಡಿದರು.

ನಗರದ ಶ್ರೀ ಪದ್ಮಾ ಚಿತ್ರಮಂದಿರದ ಎದುರು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಸಂಭ್ರಮಿಸಿದರು. ಅಂಬರೀಶ್‌ಗೆ ಜೈಕಾರ ಹಾಕಿ ಅಭಿಮಾನ ಮೆರೆದರು. ಸಿನಿಮಾ ನೋಡಲು ಬಂದವರಿಗೆ ಸಿಹಿ ತನಿಸು ಹಂಚಿದರು. ಸಿನಿಮಾ ಪೋಸ್ಟರ್‌ಗೆ ಹಾರ ಹಾಕಿದರು. ನಗರದಲ್ಲಿ ಪದ್ಮಾ ಚಿತ್ರಮಂದಿರ ಮತ್ತು ಅರ್ಬನ್‌ ಒಯಾಸಿಸ್‌ ಮಾಲ್‌ನ ಸಿನಿಪೊಲಿಸ್‌ನಲ್ಲಿ ಚಿತ್ರ ತೆರೆ ಕಂಡಿದೆ.

ಕ್ಷಮೆ ಕೇಳಲು ಆಗ್ರಹ: ಸಿನಿಮಾಕ್ಕೆ ಸ್ವಾಗತ ಕೋರುವ ಭರದಲ್ಲಿ ಮುತ್ತಣ್ಣನವರ ವಾಯುಮಾಲಿನ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯ (ಎನ್‌ಎಸ್‌ಯುಐ) ಮಹಾ ಕಾರ್ಯದರ್ಶೀ ಸುನಿಲ ಮರಾಠೆ ಟೀಕಿಸಿದ್ದಾರೆ.

ADVERTISEMENT

‘ಪಟಾಕಿಗಳನ್ನು ಸುಡುವ ಮೂಲಕ ವಾಯುಮಾಲಿನ್ಯ ಮಾಡಿ ಜನಸಾಮಾನ್ಯರ ಆರೋಗ್ಯಕ್ಕೆ ಹಾನಿ ಉಂಟು ಮಾಡಿದ್ದಾರೆ. ಪಾಲಿಕೆಯ ಕರದಾತರ ಹಣದಿಂದ ಚಲನಚಿತ್ರ ನಟರನ್ನು ನಗರಕ್ಕೆ ಕರೆತಂದು ಪ್ರಚಾರ ಪಡೆಯುವುದರಲ್ಲಿ ಮುತ್ತಣ್ಣನವರ ಹೆಸರುವಾಸಿ. ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಅವರು ನಗರದ ಆರೋಗ್ಯ ಕಾಪಾಡುವ ಹೊಣೆ ಹೊತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪಟಾಕಿ ಸುಟ್ಟಿದ್ದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

ಮುತ್ತಣ್ಣನವರು ಕೂಡಲೇ ಕ್ಷಮೆ ಕೋರಬೇಕು, ಇಲ್ಲವಾದರೆ ಉಗ್ರಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.