ADVERTISEMENT

ಬೇಸಿಗೆ: ಕುಡಿಯುವ ನೀರು ಶೇಖರಣೆಗೆ ಆದ್ಯತೆ

ಜಿಲ್ಲೆಯಲ್ಲಿವೆ 90 ನೀರಿನ ಸಮಸ್ಯಾತ್ಮಕ ಗ್ರಾಮಗಳು

ಎಲ್‌.ಮಂಜುನಾಥ
Published 11 ಮೇ 2025, 4:39 IST
Last Updated 11 ಮೇ 2025, 4:39 IST
ನವಲಗುಂದ ಪಟ್ಟಣದಲ್ಲಿನ ಚನ್ನಮ್ಮನ ಜಲಾಶಯ 
ಚಿತ್ರ: ಅಬ್ದುಲರಝಾಕ ನದಾಫ್
ನವಲಗುಂದ ಪಟ್ಟಣದಲ್ಲಿನ ಚನ್ನಮ್ಮನ ಜಲಾಶಯ  ಚಿತ್ರ: ಅಬ್ದುಲರಝಾಕ ನದಾಫ್   

ಹುಬ್ಬಳ್ಳಿ: ಬೇಸಿಗೆಯಲ್ಲಿ ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಿರಲಿಯೆಂದು ಜಿಲ್ಲಾಡಳಿತವು ಅಗತ್ಯ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ 90 ಗ್ರಾಮಗಳನ್ನು ಗುರುತಿಸಿದೆ. ಕೆರೆಗಳ ನೀರಿನ ಲಭ್ಯತೆ ಮತ್ತು ಮುಂಬರುವ ದಿನಗಳಲ್ಲಿ ನೀರಿನ ಅಗತ್ಯ ಪ್ರಮಾಣದ ಬಗ್ಗೆಯೂ ಪರಿಶೀಲನೆ ನಡೆಸಿದೆ. 

ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ ಸೇರಿ ಜಿಲ್ಲೆಯ ಕೆರೆಗಳಲ್ಲಿ ಆಯಾ ಭಾಗದ ಗ್ರಾಮಗಳಿಗೆ ಒಂದೆರಡು ತಿಂಗಳು ನೀರು ಪೂರೈಸುವಷ್ಟು ನೀರು ಲಭ್ಯವಿದೆ. 

ಅಳ್ನಾವರ ತಾಲ್ಲೂಕಿನ ಬೆಣಚಿ, ಧಾರವಾಡದ ಹೊಸಹಟ್ಟಿ, ಕ್ಯಾರಕೊಪ್ಪ, ಮುಗದ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ನೂಲ್ವಿ, ಮಲ್ಲಿಗೆವಾಡ. ಕುಂದಗೋಳ ತಾಲ್ಲೂಕಿನ ಬಿ.ತರ್ಲಗಟ್ಟಾ. ಕಲಘಟಗಿಯ ಬೆಲವಂತರ ಹಾಗೂ ಮಿಶ್ರಿಕೋಟೆ ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ.

ADVERTISEMENT

‘ಸಮಸ್ಯಾತ್ಮಕ ಗ್ರಾಮಗಳಲ್ಲಿನ ಖಾಸಗಿ ಕೊಳವೆಬಾವಿಗಳನ್ನು ಸಂಬಂಧಿಸಿದ ಮಾಲೀಕರಿಂದ ಬಾಡಿಗೆ ಪಡೆದು ಗ್ರಾಮಸ್ಥರಿಗೆ ನೀರು ಪೂರೈಸಲು ಸ್ಥಳೀಯ ಪಂಚಾಯ್ತಿ ವ್ಯಾ‍ಪ್ತಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ 186 ಖಾಸಗಿ ಕೊಳವೆಬಾವಿಗಳನ್ನು  ಗುರುತಿಸಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಗದೀಶ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು 13ರಿಂದ ನವಿಲುತೀರ್ಥ ಜಲಾಶಯದಿಂದ ಧಾರವಾಡ ಜಿಲ್ಲಾ ವ್ಯಾಪ್ತಿಯ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.

10 ದಿನ ನೀರು ಹರಿಸುವುದರಿಂದ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ, ಕಿರೇಸೂರ, ಇಂಗಳಹಳ್ಳಿ, ಬ್ಯಾಹಟ್ಟಿ, ಕುಸಗಲ್‌, ಮಂಟೂರ, ಬಂಡಿವಾಡ ಸೇರಿ ನವಲಗುಂದ, ಅಣ್ಣಿಗೇರಿ ಮತ್ತು ಜಿಲ್ಲೆಯ 60ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಕುಡಿಯುವ ನೀರಿನ ಕೆರೆಗಳು ಭರ್ತಿಯಾಗಲಿವೆ. ಈ ನೀರನ್ನು ಜನರು 3 ತಿಂಗಳವರೆಗೆ ಬಳಸಬಹುದು.

‘ಜಿಲ್ಲೆಯ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರನ್ನು ಬೇಸಿಗೆ ವೇಳೆ, ನೀರಿನ ಅಭಾವ ಎದುರಾದಾಗ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಕೃಷಿಗೆ ಬಳಸಬಾರದು’ ಎಂಬ ಷರತ್ತು ವಿಧಿಸಲಾಗಿದೆ. ಇದನ್ನು ಪರಿಶೀಲಿಸಲು ಆಯಾ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಲಾಗಿದೆ. ನೀರು ಬಿಡುವ ದಿನಗಳಲ್ಲಿ ಕಾಲುವೆಗೆ ತಾಗಿದಂತೆ ಅಳವಡಿಸಿರುವ ರೈತರ ವಿದ್ಯುತ್‌ ಪಂಪ್‌ಸೆಟ್‌ಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ.

13ರಿಂದ ನವಿಲುತೀರ್ಥ ಜಲಾಶಯದಿಂದ ನೀರು

‘ನವೀಲುತೀರ್ಥ ಜಲಾಶಯದಿಂದ ಮೇ 13ರಿಂದ 22ರವರೆಗೆ ನೀರು ಹರಿಸಲಾಗುವುದು. ಮಲಪ್ರಭಾ ಬಲದಂಡೆ ಕಾಲುವೆ ವ್ಯಾಪ್ತಿಯ ಹುಬ್ಬಳ್ಳಿ ನವಲಗುಂದ ಅಣ್ಣಿಗೇರಿ ಕುಂದಗೋಳ ತಾಲ್ಲೂಕಿನಲ್ಲಿರುವ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ನೋಡಲ್‌ ಅಧಿಕಾರಿಗಳನ್ನು ನೇಮಿಸಲು ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.