ADVERTISEMENT

ಕೆರೆಯಂಗಳದಲ್ಲಿ ರೋಮಾಂಚನಕಾರಿ ‘ನೀರಾಟ’

ಯುವಜನರನ್ನು ಆಕರ್ಷಿಸಿದ ಕೆಲಗೇರಿ ಕೆರೆಯ ಜಲಸಾಹಸ ಕ್ರೀಡೆಗಳು

ಬಸೀರ ಅಹ್ಮದ್ ನಗಾರಿ
Published 15 ಜನವರಿ 2023, 6:21 IST
Last Updated 15 ಜನವರಿ 2023, 6:21 IST
ಧಾರವಾಡದ ಕೆಲಗೇರಿ ಕೆರೆಯಲ್ಲಿ ಶನಿವಾರ ಬನಾನಾ ರೈಡ್‌ ಪುಳಕ ಅನುಭವಿಸಿ ಖುಷಿಪಟ್ಟ ಯುವಜನರು... –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಧಾರವಾಡದ ಕೆಲಗೇರಿ ಕೆರೆಯಲ್ಲಿ ಶನಿವಾರ ಬನಾನಾ ರೈಡ್‌ ಪುಳಕ ಅನುಭವಿಸಿ ಖುಷಿಪಟ್ಟ ಯುವಜನರು... –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

ಧಾರವಾಡ: ಒಂದೆಡೆ ನೆತ್ತಿ ಸುಡುತ್ತಿದ್ದ ಬಿಸಿಲು; ಆಗೀಗ ತಂಗಾಳಿಯು ಅಲೆ–ಅಲೆಯಾಗಿ ಬಂದು ತೀರಕ್ಕೆ ಅಪ್ಪಳಿಸುತ್ತಿದ್ದ ಪರಿ... ಮತ್ತೊಂದೆಡೆ, ಲೈಫ್‌ಜಾಕೆಟ್‌ ಧರಿಸಿ ಕೆರೆಯಂಗಳಕ್ಕಿಳಿದು ಸಂಭ್ರಮಿಸಲು ಸಾಲುಗಟ್ಟಿದ್ದ ಕಾಯುತ್ತಿದ್ದ ಯುವಜನರು...

ಇಂಥ ದೃಶ್ಯ ಧಾರವಾಡದ ವಿಶಾಲ ಕೆಲಗೇರಿ ಕೆರೆಯಂಗಳದಲ್ಲಿ ಶನಿವಾರ ಕಂಡುಬಂತು. ಸಾಹಸದೊಂದಿಗೆ ಮನರಂಜನೆ ನೀಡುವ ತರಹೇವಾರಿ ಜಲ ಸಾಹಸ ಕ್ರೀಡೆಗಳ ಸೊಬಗು ಅಲ್ಲಿ ಮೇಳೈಸಿತ್ತು.

ಒಂದಿಬ್ಬರು ಕಯಾ‌ಕಿಂಗ್‌ ಮಾಡಿ ಖುಷಿಪಟ್ಟರೇ, ಆರೇಳು ಜನರ ತಂಡ ಬೋಟ್‌ ಏರಿ ರ್‍ಯಾಫ್ಟಿಂಗ್‌ ಮಾಡಿ ಸಂಭ್ರಮಿಸಿತು. ಒಂದಿಷ್ಟು ಯುವಕರು ತೀರದಲ್ಲೇ ಲಂಗರು ಹಾಕಿದ್ದ ಬೃಹದಾಕಾರ ಜಾರ್ಬಿಂಗ್‌ನಲ್ಲಿ ನಸುಳಿ ಪೆಡಲಿಂಗ್‌ ಮಾಡಿ ಖುಷಿಪಟ್ಟರು.

ADVERTISEMENT

ಹಲವು ಮಂದಿ ಸಾಲಾಗಿ ಕುಳಿತು ಜೆಟ್‌ಸ್ಕೀ ಹಿಂದೆ ‘ಬನಾನಾ ರೈಡ್‌’ ಪುಳಕ ಅನುಭವಿಸಿ ಕೇಕೇ ಹಾಕಿದರೆ, ಕೆಲವರು ಅದರ ಮೇಲಿಂದಲೇ ನೀರಿಗೆ ಬಿದ್ದು ‘ನೀರಾಟ’ವಾಡಿ ಈಜಿ ದಡಮುಟ್ಟಿ ನಸುನಕ್ಕರು...ಮತೊಂದಿಷ್ಟು ಮಂದಿ ಸ್ಪೀಡ್‌ಬೋಟ್‌ ಹತ್ತಿ ಕೆರೆಯಲ್ಲಿ ವಿಹರಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಕೆಲಗೇರಿ ಕೆರೆಯಲ್ಲಿ ಹಮ್ಮಿಕೊಂಡಿರುವ ಜಲಸಾಹಸ ಕ್ರೀಡೆಗಳು ಯುವಜನರ ಮೆಚ್ಚುಗೆಗೆ ಪಾತ್ರವಾದವು.

‘ಸಾಹಸದೊಂದಿಗೆ ಮನರಂಜನೆ ನೀಡುವ ಉದ್ದೇಶದಿಂದ 25 ಕಯಾಕ್‌ಗಳು(ಹುಟ್ಟು ಬಳಸಿ ಚಲಿಸುವ ಬೋಟ್‌), ಐದು ರ್‍ಯಾಫ್ಟಿಂಗ್‌(ಗಾಳಿ ತುಂಬಿದ ಬೋಟ್‌), ಎರಡು ಸ್ಪೀಡ್‌ಬೋಟ್‌(ಯಂತ್ರ ಚಾಲಿತ ಬೋಟ್‌), ಎರಡು ಜೆಟ್‌ಸ್ಕೀಗಳು(ವಾಟರ್‌ ಸ್ಕೂಟರ್‌), ಒಂದು ಬನಾನಾ ರೈಡ್‌(ಬಾಳೆಹಣ್ಣು ಹೋಲುವ ಗಾಳಿ ತುಂಬಿದ ಟ್ಯೂಬ್‌) ಹಾಗೂ ಒಂದು ಜಾರ್ಬಿಂಗ್‌ ಸ್ಪೀಯರ್‌ ತರಲಾಗಿದೆ. 22 ಜನರ ತಂಡವು ಈ ಸಾಹಸ ಕ್ರೀಡೆಗಳನ್ನು ಆಡಲು ಯುವಜನರಿಗೆ ನೆರವು ನೀಡಲಾಗುತ್ತಿದೆ’ ಎಂದು ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಶೆಟ್ಟರ್‌ ಉದ್ಘಾಟನೆ:

ಯುವಜನೋತ್ಸವದ ಮೂರನೇ ದಿನವಾದ ಶನಿವಾರ ಶಾಸಕ ಜಗದೀಶ ಶೆಟ್ಟರ್‌ ಸಾಹಸ ಜಲ ಕ್ರೀಡೆಗಳನ್ನು ಉದ್ಘಾಟಿಸಿದರು. ಬಳಿಕ ಅವರು ಸ್ಫೀಡ್‌ ಬೋಟ್‌ ಏರಿ ಒಂದು ಕೆರೆಯಲ್ಲಿ ವಿಹರಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.