ADVERTISEMENT

ನೀರು ಪೂರೈಕೆ ಖಾಸಗೀಕರಣ: ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 10:07 IST
Last Updated 9 ಮೇ 2022, 10:07 IST
   

ಹುಬ್ಬಳ್ಳಿ: ಅವಳಿನಗರದಲ್ಲಿ ಕುಡಿಯುವ ನೀರು ಪೂರೈಕೆಯನ್ನು ಖಾಸಗೀಕರಣ ಮಾಡಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೋಮವಾರ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮೂಲ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರು ಪೂರೈಕೆಯನ್ನು ಸಹ ಸರ್ಕಾರ ಖಾಸಗಿಯವರ ಕೈಗೆ ನೀಡಿ, ಹಣ ಪೀಕಲು ಮುಂದಾಗಿದೆ. ಖಾಸಗಿ ಕಂಪನಿಗೆ ನೀಡಿರುವ ಗುತ್ತಿಗೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

'ಪ್ರಾಯೋಗಿಕವಾಗಿ ಜಾರಿಗೆ ತಂದಂಥ ನಿರಂತರ ನೀರು ಪೂರೈಕೆಯನ್ನು ಅವಳಿನಗರದ ಎಲ್ಲ ವಾರ್ಡ್'ಗಳಿಗೂ ವಿಸ್ತರಿಸಲಾಗುತ್ತಿದೆ. ಇಷ್ಟು ವರ್ಷ ಸಮರ್ಥವಾಗಿ ನೀರು ಪೂರೈಕೆ ಮಾಡಿದ ಜಲಮಂಡಳಿಯನ್ನೇ ಹೊರಗಿಟ್ಟು ಅದರ ಜವಾಬ್ದಾರಿಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ಅಲ್ಲದೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು ಕಾನೂನು ಬಾಹಿರ' ಎಂದು ಪಕ್ಷದ ಕಾರ್ಯಕರ್ತ ವಿಕಾಸ ಸೊಪ್ಪಿನ ಹೇಳಿದರು.

ADVERTISEMENT

'ಪೈಪ್ ಲೈನ್ ಕಾಮಗಾರಿ, ನೀರು ಶುದ್ಧೀಕರಣ ಎಲ್ಲವೂ ಪಾಲಿಕೆಯದ್ದಾಗಿದ್ದು, ಬಿಲ್ ಹರಿಯುವ ಗುತ್ತಿಗೆ ಮಾತ್ರ ಖಾಸಗಿ ಕಂಪನಿಯದ್ದಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು' ಎಂದರು.

ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅನಂತಕುಮಾರ ಬುಗುಡಿ, ರೇವಣ್ಣ ಸಿದ್ಸಪ್ಪ, ಮಲ್ಲಪ್ಪ ತಡಸದ, ಇಂದಿರಾ ಬಂಕಾಪುರ, ತಸ್ಮಿಯಾ ತಳೆವಾಡ, ಪ್ರತಿಭಾ ದಿವಾಕರ, ಗೋಪಾಲ ಕುಲಕರ್ಣಿ, ಎ.ಬಿ. ಬಿರಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.