ADVERTISEMENT

ವಾರಾಂತ್ಯ ಕರ್ಪ್ಯೂ: ಒಂದೇ ನಿಯಮಕ್ಕೆ ವಿರೋಧ- ವಿನಯ್ ಜವಳಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 13:42 IST
Last Updated 13 ಜನವರಿ 2022, 13:42 IST
ವಿನಯ್ ಜೆ. ಜವಳಿ
ವಿನಯ್ ಜೆ. ಜವಳಿ   

ಹುಬ್ಬಳ್ಳಿ: ಕೋವಿಡ್‌ ಪ್ರಕರಣಗಳು ಕಡಿಮೆ ಇರುವ ಜಿಲ್ಲೆಗಳಲ್ಲಿಯೂ ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಿದ್ದು ಸರಿಯಲ್ಲ. ಇದರಿಂದ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ಇದನ್ನು ಪುನರ್‌ ಪರಿಶೀಲಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ನೂತನ ಅಧ್ಯಕ್ಷ ವಿನಯ್ ಜೆ. ಜವಳಿ ಮನವಿ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣದಿಂದ ಎರಡು ವರ್ಷಗಳಿಂದ ಯಾವ ಉದ್ಯಮವೂ ಸರಿಯಾಗಿ ನಡೆದಿಲ್ಲ. ಬಹಳಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಷ್ಟೇ ವಾರಾಂತ್ಯ ಕರ್ಪ್ಯೂ ವಿಧಿಸಬೇಕು. ಎಲ್ಲ ಜಿಲ್ಲೆಗಳಿಗೂ ಇದು ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ವಾರಾಂತ್ಯದ ದಿನಗಳಂದು ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ಕೊಟ್ಟಿದೆ. ವಾರಾಂತ್ಯದಂದು ಬೇರೆ ವಸ್ತುಗಳ ಖರೀದಿಗೆ ಹೊರ ಜಿಲ್ಲೆಗಳಿಂದ ಜನ ಬರುತ್ತಾರೆ. ಆದ್ದರಿಂದ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮಾಹಿತಿ ಬಂದಿಲ್ಲ: ನಗರದಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್‌ ಕಾಮಗಾರಿ ಬಗ್ಗೆ ಪರಿಷ್ಕೃತ ವಿನ್ಯಾಸದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನಮಗೆ ಬಂದಿಲ್ಲ ಎಂದು ಜವಳಿ ಹೇಳಿದರು.

‘ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್‌ ನಿರ್ಮಾಣದಿಂದ ಗರಿಷ್ಠ ಶೇ 10ರಿಂದ 15ರಷ್ಟು ಜನರಿಗೆ ಮಾತ್ರ ಉಪಯೋಗವಾಗುತ್ತದೆ. ಅಲ್ಲಿ ರಸ್ತೆ ವಿಸ್ತರಣೆ, ಅಭಿವೃದ್ಧಿ ಹಾಗೂ ಸಮಗ್ರ ಯೋಜನೆ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಮೊದಲು ಹಲವು ಸಲಹೆಗಳನ್ನು ನೀಡಿದ್ದೆವು. ಅವುಗಳನ್ನು ಅಳವಡಿಸಿಕೊಂಡ ಬಗ್ಗೆ ಮಾಹಿತಿಯಿಲ್ಲ. ಈಗಾಗಲೇ ಕೆಲಸ ಆರಂಭವಾಗಿರುವುದರಿಂದ ಕಾಮಗಾರಿ ಆದಷ್ಟು ಜನಸ್ನೇಹಿಯಾಗಿ ಮಾರ್ಪಡಿಸಬೇಕೆಂದು ಮನವಿ ಮಾಡುತ್ತೇವೆ’ ಎಂದು ತಿಳಿಸಿದರು.

‘ಹೊಸದಾಗಿ ಅಧಿಕಾರಕ್ಕೆ ಬಂದಿರುವ ನಮ್ಮ ಆಡಳಿತ ಮಂಡಳಿ ಜಿಎಸ್‌ಟಿ ಕಾನೂನು ವಿಭಾಗ ಆರಂಭಿಸಲು ಯೋಜನೆ ರೂಪಿಸಿದೆ. ಇದರಲ್ಲಿ ವಕೀಲರು ಹಾಗೂ ನಿವೃತ್ತ ಅಧಿಕಾರಿಗಳು ಇರಲಿದ್ದು, ಅವರು ಉದ್ಯಮಿಗಳು ಜಿಎಸ್‌ಟಿ ಕುರಿತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ’ ಎಂದರು.

‘ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತು ತಯಾರಿಕಾ ಕಂಪನಿಗಳ (ಎಫ್‌ಎಂಸಿಜಿ) ಕ್ಲಸ್ಟರ್‌, ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯ (ಸಿಐಪಿಇಟಿ) ಕೇಂದ್ರಗಳು ಜಿಲ್ಲೆಗೆ ಬರಲಿವೆ. ಮಕ್ಕಳ ಕೌಶಲಾಭಿವೃದ್ಧಿಗೆ ಒತ್ತು ನೀಡಲು ಕೌಶಲ ತರಬೇತಿ ತರಗತಿ ನಡೆಸಲಾಗುತ್ತಿದೆ’ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್‌. ಸತೀಶ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಜಿ.ಕೆ. ಆದಪ್ಪಗೌಡರ, ಜಂಟಿ ಗೌರವ ಕಾರ್ಯದರ್ಶಿ ಶಂಕರ ಕೋಳಿವಾಡ ಇದ್ದರು.

ಎಪಿಎಂಸಿ ಸಮೀಪದಲ್ಲಿ ಬಹುಪಯೋಗಿ ವಸ್ತು ಪ್ರದರ್ಶನಾ ಕೇಂದ್ರ ಪುನರ್‌ ನವೀಕರಣ ಕಾರ್ಯ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಪ್ರದರ್ಶನ ಆಯೋಜಿಸಲಾಗುವುದು.
ವಿನಯ್ ಜೆ. ಜವಳಿ, ಕೆಸಿಸಿಐ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.