ADVERTISEMENT

Green Karnataka plans: ‘ಹಸಿರು ಧಾರವಾಡ’ಕ್ಕಾಗಿ ನೆಡುತೋಪು

ಧಾರವಾಡ ಜಿಲ್ಲೆಯಲ್ಲಿ ‘ಹಸಿರು ಕರ್ನಾಟಕ’ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಆದ್ಯತೆ

ಎಲ್‌.ಮಂಜುನಾಥ
Published 1 ಸೆಪ್ಟೆಂಬರ್ 2025, 5:51 IST
Last Updated 1 ಸೆಪ್ಟೆಂಬರ್ 2025, 5:51 IST
ಹುಬ್ಬಳ್ಳಿ ಗ್ರಾಮೀಣ ಪ್ರದೇಶದ ರಸ್ತೆ ಬದಿಯಲ್ಲಿ ನೆಡುತೋಪು ಮಾಡುವುದಕ್ಕಾಗಿಯೇ ಅಂಚಟಗೇರಿ ಬಳಿಯ ಬುಡನಾಳದ ಸಸ್ಯ ಪಾಲನಾಲಯದಿಂದ ಇಲಾಖೆಯ ಸಿಬ್ಬಂದಿ ಗಿಡಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬುತ್ತಿರುವುದು
ಹುಬ್ಬಳ್ಳಿ ಗ್ರಾಮೀಣ ಪ್ರದೇಶದ ರಸ್ತೆ ಬದಿಯಲ್ಲಿ ನೆಡುತೋಪು ಮಾಡುವುದಕ್ಕಾಗಿಯೇ ಅಂಚಟಗೇರಿ ಬಳಿಯ ಬುಡನಾಳದ ಸಸ್ಯ ಪಾಲನಾಲಯದಿಂದ ಇಲಾಖೆಯ ಸಿಬ್ಬಂದಿ ಗಿಡಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬುತ್ತಿರುವುದು   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವನಸಿರಿ ಕಂಡವರು, ಇದ‌ನ್ನು ಪಶ್ಚಿಮಘಟ್ಟದ ಕಾಡು ಪ್ರದೇಶ ಎನ್ನುತ್ತಾರೆ. ಇಲ್ಲಿ ಸುರಿಯುವ ಮಳೆಯು ಅಷ್ಟೇ ಸಮೃದ್ಧವಾಗಿರುತ್ತದೆ. ಧಾರಾಕಾರ ವರ್ಷಧಾರೆಯು ಇಲ್ಲಿ ಹಸಿರನ್ನು ಹೆಚ್ಚಿಸುತ್ತದೆ. ಆದರೆ, ವರ್ಷಗಳು ಕಳೆದಂತೆ, ಇಲ್ಲಿನ ಅರಣ್ಯ ಪ್ರದೇಶದ ವ್ಯಾಪ್ತಿ ಕಡಿಮೆ ಆಗತೊಡಗಿದೆ.

ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಅಳ್ನಾವರ ತಾಲ್ಲೂಕಿನ ಕೆಲ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರದೇಶವಿದೆ. ಆದರೆ, ಕುಂದಗೋಳ, ನವಲಗುಂದ ತಾಲ್ಲೂಕಿನಲ್ಲಿ ಅದರ ಲವಲೇಶವೂ ಇಲ್ಲ.

ರಾಷ್ಟ್ರೀಯ ಅರಣ್ಯ ನೀತಿ ಅನ್ವಯ ಜಿಲ್ಲೆಯ ಒಟ್ಟು ಭೂ ಪ್ರದೇಶವು ಶೇ 33ರಷ್ಟು ಅರಣ್ಯ ಅಥವಾ ಮರಗಳ ಹೊದಿಕೆಯಲ್ಲಿ ಇರಬೇಕು. ಆದರೆ, ಧಾರವಾಡ ಜಿಲ್ಲೆಯು ಶೇ 10ರಷ್ಟು ಮಾತ್ರ ಹಸಿರಿನ ಹೊದಿಕೆಯಲ್ಲಿದೆ.

ADVERTISEMENT

ನವಲಗುಂದ, ಕುಂದುಗೋಳ ತಾಲ್ಲೂಕು ಸೇರಿ ಜಿಲ್ಲೆಯ ಅಗತ್ಯವಿರುವೆಡೆ ರಸ್ತೆ ಬದಿಯಲ್ಲಿ ಹಾಗೂ ಅರಣ್ಯ ಪ್ರದೇಶದ ವ್ಯಾಪ್ತಿಯ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು, ಪೋಷಿಸುವಂತೆ ಅರಣ್ಯ ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ಜೂನ್‌ ಆರಂಭದಿಂದಲೇ ರಸ್ತೆ ಬದಿಯಲ್ಲಿ ನೆಡುತೋಪು ಕಾರ್ಯ ಹಮ್ಮಿಕೊಳ್ಳುವ ಮೂಲಕ ಅರಣ್ಯ ಪ್ರದೇಶ ವೃದ್ಧಿಸಲು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದ್ದಾರೆ. 

80 ಸಾವಿರ ನೆಡುತೋಪು ನಿರ್ಮಾಣ: 

‘ಅರಣ್ಯ ಇಲಾಖೆ ಸಚಿವರ ಸೂಚನೆಯ ಮೇರೆಗೆ ಹುಬ್ಬಳ್ಳಿ ನಗರ, ಗ್ರಾಮೀಣ, ಅಣ್ಣಿಗೇರಿ, ನವಲಗುಂದ, ಧಾರವಾಡ, ಅಳ್ನಾವರ, ಕುಂದಗೋಳ ಹಾಗೂ ಕಲಘಟಗಿ ಒಳಗೊಂಡಂತೆ ಜಿಲ್ಲೆಯಲ್ಲಿ 245 ಕಿ.ಮೀ. ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬೇವು, ಹೊಂಗೆ, ನೇರಳೆ, ಅರಳಿ, ಆಲ, ನೆಲ್ಲಿ ಸೇರಿದಂತೆ ಹೆಚ್ಚು ನೆರಳು/ ತಂಪು ನೀಡುವಂತಹ 80 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ. ಈ ಮೂಲಕವಾಗಿ ‘ಹಸಿರು ಕರ್ನಾಟಕ’ ಯೋಜನೆಯಡಿ ಜಿಲ್ಲೆಯನ್ನು ಅರಣ್ಯೀಕರಣ ಮಾಡಲು ಆದ್ಯತೆ ನೀಡಲಾಗಿದೆ’ ಎಂದರು ಧಾರವಾಡ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ್‌ ಟಿ. ಅವರು. 

ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಗಿರಿಯಾಲ ಗ್ರಾಮದ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ನೆಡಲಾಯಿತು

‘ಹೊಲದ ಬದಿ, ಜಮೀನುಗಳಲ್ಲಿ ನೆಡಲು ಶ್ರೀಗಂಧ, ಹುಣಸೆ, ಮಾವು, ನೆಲ್ಲಿ, ನೇರಳೆ, ಬಿದಿರು, ನುಗ್ಗೆ, ಕರಿಬೇವು, ಬಾದಾಮಿ, ಹೊಂಗೆ, ಹೆಬ್ಬೇವು ಸಸಿಗಳನ್ನು ಸಾರ್ವಜನಿಕರಿಗೆ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಮೂಲಕ ಕೃಷಿ ಅರಣ್ಯ ಪ್ರದೇಶಕ್ಕೂ ಒತ್ತು ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಬೇಸಿಗೆಯ ತಾಪಮಾನವನ್ನು ಕಡಿಮೆ ಮಾಡುವುದಕ್ಕಾಗಿಯೇ ಅರಣ್ಯ ಇಲಾಖೆ ವತಿಯಿಂದ ಈಗಾಗಲೇ ಸಸಿಗಳನ್ನು ನೆಟ್ಟು, ಪೋಷಿಸುವಂತಹ ವನಮಹೋತ್ಸವ ಹಾಗೂ ಅರಣ್ಯೀಕರಣ ಕಾಮಗಾರಿಗೂ ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಅವರು. 

ಹುಬ್ಬಳ್ಳಿ ವಲಯದಲ್ಲಿ 60 ಸಾವಿರ: 

‘ಮಳೆಗಾಲದ ಅವಧಿಯಲ್ಲಿ ಹುಬ್ಬಳ್ಳಿ ವಲಯದ ಅಣ್ಣಿಗೇರಿ–ಶಿಶುವಿನಹಳ್ಳಿ ರಸ್ತೆ, ಬೆನ್ನೂರು– ಬಸಾಪುರ ಮುಖ್ಯ ಕಾಲುವೆ ಮಾರ್ಗ, ಬಸಾಪುರ ಕೆರೆ, ಅಣ್ಣಿಗೇರಿ– ಬಸಾಪುರ ರಸ್ತೆ, ಬಸಾಪುರ– ಭದ್ರಾಪುರ ರಸ್ತೆ ಸೇರಿದಂತೆ ಅಣ್ಣಿಗೇರಿ ತಾಲ್ಲೂಕಿನಲ್ಲಿ ಒಟ್ಟು 56 ಕಿ.ಮೀ. ವ್ಯಾಪ್ತಿಯಲ್ಲಿ ನೆಡುತೋಪುಗಳನ್ನು ನಿರ್ಮಾಣ ಮಾಡಲಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಆರ್‌.ಎಸ್‌. ಉಪ್ಪಾರ.

ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಕುಸಗಲ್‌– ಕಿರೆಸೂರು ಮಾರ್ಗದ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೆಡುತೋಪು ಮಾಡಿದರು

‘ಹುಬ್ಬಳ್ಳಿ ವಲಯ ವ್ಯಾಪ್ತಿಯ ಹುಬ್ಬಳ್ಳಿ ಶಹರ, ಗ್ರಾಮೀಣ, ಅಣ್ಣಿಗೇರಿ, ಕುಂದಗೋಳ, ನವಲಗುಂದ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಲ್ಲಿ 60 ಸಾವಿರ ಸಸಿಗಳನ್ನು ನೆಡಲಾಗಿದೆ. ಇದರೊಂದಿಗೆ ಸಾಮಾಜಿಕ ಅರಣ್ಯ ಯೋಜನೆ ವ್ಯಾಪ್ತಿಯಲ್ಲಿಯೂ ನೂರಾರು ಸಸಿಗಳನ್ನು ಬೆಳೆಸಲಾಗಿದೆ’ ಎನ್ನುತ್ತಾರೆ ಅವರು.

‘ಧಾರವಾಡ, ಕಲಘಟಗಿ, ಅಳ್ಳಾವರ ತಾಲ್ಲೂಕಿನಲ್ಲಿ ಹಸಿರು ಇರುವ ಕಾರಣ, ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ. ಒಟ್ಟಾರೆ ಧಾರವಾಡ ಮತ್ತು ಹುಬ್ಬಳ್ಳಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಪ್ರಸ್ತುತ ಮುಂಗಾರು ಅವಧಿಯಲ್ಲಿ 80ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡುವ ಮೂಲಕ ಜಿಲ್ಲೆಯ ಹಸಿ‌ರೀಕರಣಕ್ಕೆ ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಅವರು.

ಧಾರವಾಡ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಸಿಗಳು 
ಜಿಲ್ಲೆಯ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಪ್ರಸ್ತುತ ಮಳೆಗಾಲದ ಅವಧಿಯಲ್ಲಿ ರಸ್ತೆ ಬದಿಯಲ್ಲಿ ಒಟ್ಟು 80 ಸಾವಿರ ಸಸಿಗಳನ್ನು ನೆಡಲಾಗಿದೆ. 2026ರ ಮುಂಗಾರು ಅವಧಿಯವರೆಗೆ ಇನ್ನೂ 63 ಸಾವಿರ ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ
ವಿವೇಕ್‌ ಟಿ. ಉಪ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಪ್ರಾದೇಶಿಕ ವಿಭಾಗ
ಪ್ರಸ್ತುತ ಮಳೆಗಾಲದಲ್ಲಿ ಹುಬ್ಬಳ್ಳಿ ಶಹರ ಗ್ರಾಮೀಣ ನವಲಗುಂದ ಅಣ್ಣಿಗೇರಿ ಕುಂದಗೊಳ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 60 ಸಾವಿರ ಗಿಡಗಳನ್ನು ರಸ್ತೆಬದಿಯಲ್ಲಿ ನೆಡುತೋಪು ಮಾಡಲಾಗಿದೆ
ಆರ್.ಎಸ್‌.ಉಪ್ಪಾರ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ವಲಯ ಹುಬ್ಬಳ್ಳಿ
ಪ್ರತಿ ಮಳೆಗಾಲದ ಅವಧಿಯಲ್ಲಿ ಅರಣ್ಯ ಇಲಾಖೆಯಿಂದ ಜಿಲ್ಲಾ ವ್ಯಾಪ್ತಿಯ ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಇದರಿಂದ ನೀರಿನ ನಿರ್ವಹಣೆ ಇಲ್ಲದೇ ಸಹಜವಾಗಿಯೇ ಗಿಡಗಳು ಬೆಳೆಯುತ್ತವೆ
ಅರಣ್ಯ ಇಲಾಖೆಯ ಸಿಬ್ಬಂದಿ
63 ಸಾವಿರ ಸಸಿ ವಿತರಿಸುವ ಗುರಿ...
ಈ ಬಾರಿಯ ಮಳೆಗಾಲದ ಅವಧಿಯಲ್ಲಿ ಧಾರವಾಡ ಅಳ್ನಾವರ ಹುಬ್ಬಳ್ಳಿ ಕುಂದಗೋಳ ಕಲಘಟಗಿ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಇದುವರೆಗೂ ಒಟ್ಟು 77967 ಸಸಿಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗಿದೆ. ‘ಹಸಿರು ಕರ್ನಾಟಕ’ ಯೋಜನೆಯಡಿಯಲ್ಲಿ 3ಸಾವಿರ ಸಸಿಗಳನ್ನು ವನಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಶಾಲೆ ಕಾಲೇಜು ಸರ್ಕಾರಿ ಕಚೇರಿಗಳ ಆವರಣದಲ್ಲಿ ನೆಡಲಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟು 80967 ಸಸಿಗಳನ್ನು ನಡೆಲಾಗಿದೆ. ಇದರೊಂದಿಗೆ 2026ರ ಮುಂಗಾರು ಅವಧಿಯವರಿಗೆ ರಸ್ತೆ ಬದಿಯಲ್ಲಿ 60 ಸಾವಿರ ಹಸಿರು ಕರ್ನಾಟಕ ಯೋಜನೆಯಲ್ಲಿ 3 ಸಾವಿರ ಸಸಿಗಳು ಸೇರಿದಂತೆ ಇನ್ನೂ 63 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಧಾರವಾಡ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ್‌ ಟಿ. ಮಾಹಿತಿ ನೀಡುತ್ತಾರೆ.

ನೆಡುತೋಪು: ದಾಖಲೆಗೆ ಸೀಮಿತ

‘ಸಸಿ ನೆಡುವುದು ನಿಗದಿತ ಅವಧಿಯ ತನಕ ಪೋಷಿಸುವುದು ಅರಣ್ಯ ಇಲಾಖೆಯ ಪ್ರತಿ ವರ್ಷದ ಪ್ರಕ್ರಿಯೆ. ಆದರೆ ಅವಧಿ ಮುಗಿದ ನಂತರ ನಿರ್ವಹಣೆ ಇಲ್ಲದೆ ಬಹುತೇಕ ಸಸಿಗಳು ಹಾಳಾಗುತ್ತಿವೆ. ದಾಖಲೆಗಳಲ್ಲಿ ಮಾತ್ರ ಸಾವಿರಾರು ಸಸಿಗಳ ನೆಡುತೋಪು ನಿರ್ಮಾಣ ಮಾಡಲಾಗಿದೆ ಎಂದು ತೋರಿಸಲಾಗುತ್ತದೆ. ಆದರೆ ವಾಸ್ತವ ಬೇರೆನೇ ಇದೆ’ ಎಂಬ ಸಾರ್ವಜನಿಕರ ಆರೋಪವೂ ಇದೆ. ‘ನೆಟ್ಟ ಗಿಡಗಳು ಮರಗಳಾಗಿದ್ದರೆ ಅರಣ್ಯೀಕರಣದ ಪ್ರಮಾಣ ಹೆಚ್ಚುತ್ತಲೇ ಸಾಗಬೇಕಿತ್ತು. ಆದರೆ ಇದಾಗಿಲ್ಲ’ ಎಂದು ಪರಿಸರಪ್ರಿಯ ರಮೇಶ ದೂರುತ್ತಾರೆ. 

ಜನರ ಸಹಕಾರ ಮುಖ್ಯ:

 ‘ಜಿಲ್ಲೆಯಲ್ಲಿ ಪ್ರಸ್ತುತ 36214 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಪ್ರತಿವರ್ಷ ಇಲಾಖೆಯಿಂದ ಮಾಡುವ ನೆಡುತೋಪು ಕಾರ್ಯದಲ್ಲಿ ಶೇ 70ರಷ್ಟು ಸಸಿಗಳು ಬೆಳೆದು ಮರಗಳಾಗುತ್ತಿವೆ. ಮೇ– ಜುಲೈ ಅವಧಿಯಲ್ಲಿ ಸಸಿಗಳನ್ನು ನೆಡುತ್ತೇವೆ. ಪೋಷಿಸಲು ಪ್ರತಿ 3ಕಿ.ಮೀ. ವ್ಯಾಪ್ತಿಯಲ್ಲಿ 3 ವರ್ಷದ ಅವಧಿಗೆ ಇಲಾಖೆಯಿಂದ ಸಿಬ್ಬಂದಿಯನ್ನು ನೇಮಿಸುತ್ತೇವೆ. ಅವಧಿ ಮುಗಿದ ನಂತರ ಸಸಿಗಳ ಪೋಷಣೆಯಲ್ಲಿ ಸಾರ್ವಜನಿಕರು ಹೊಣೆಗಾರಿಕೆಯೂ ಇರುತ್ತದೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ್‌. ‘ಸಸಿಗಳ ರಕ್ಷಣೆಗಾಗಿ ಕೋಲು ಮುಳ್ಳುಗಳ ಬೇಲಿ ಹಾಕಲಾಗಿರುತ್ತದೆ. ಆದರೆ ಕುರಿಗಾಹಿಗಳು ಸಾರ್ವಜನಿಕರು ಕೋಲು ಕಿತ್ತು ಮುಳ್ಳಿನ ಬೇಲಿ ಹಾಳುಮಾಡುತ್ತಾರೆ. ಇದರಿಂದಾಗಿ ಕೆಲ ಸಸಿಗಳ ಬೆಳೆವಣಿಗೆಯು ಕುಂಠಿತವಾಗಿ ಹಾಳಾಗುವ ಸಾಧ್ಯತೆಯೂ ಇರುತ್ತದೆ’ ಎನ್ನುತ್ತಾರೆ ಅವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.