ADVERTISEMENT

ಸತ್ಯ ಮುಚ್ಚಿಟ್ಟು ಶಾಂತಿ ಸ್ಥಾಪಿಸುವ ಮಾತೇಕೆ?: ನಟ ಪ್ರಕಾಶ ಬೆಳವಾಡಿ ಪ್ರಶ್ನೆ

‘ದಿ ಕಾಶ್ಮೀರ್ ಫೈಲ್ಸ್‌’ ಚಲನಚಿತ್ರ ಸಂವಾದದಲ್ಲಿ ನಟ ಪ್ರಕಾಶ ಬೆಳವಾಡಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 2:30 IST
Last Updated 12 ಏಪ್ರಿಲ್ 2022, 2:30 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಹಾಗೂ ನಿರ್ದೇಶಕ ಪ್ರಕಾಶ ಬೆಳವಾಡಿ ಮಾತನಾಡಿದರು. ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಮತ್ತು ಪ್ರಜ್ಞಾ ಪ್ರವಾಹ ಕ್ಷೇತ್ರ ಸಂಯೋಜಕ ರಘುನಂದನ ಇದ್ದಾರೆ
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಹಾಗೂ ನಿರ್ದೇಶಕ ಪ್ರಕಾಶ ಬೆಳವಾಡಿ ಮಾತನಾಡಿದರು. ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಮತ್ತು ಪ್ರಜ್ಞಾ ಪ್ರವಾಹ ಕ್ಷೇತ್ರ ಸಂಯೋಜಕ ರಘುನಂದನ ಇದ್ದಾರೆ   

ಹುಬ್ಬಳ್ಳಿ: ‘ಚಲನಚಿತ್ರವು ಕೋಮು ದ್ವೇಷ ಹರಡಿ, ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಹಲವರು ವಾದಿಸುತ್ತಿದ್ದಾರೆ. ಆದರೆ, ಸತ್ಯವನ್ನು ಮುಚ್ಚಿಟ್ಟು ಶಾಂತಿ ಸ್ಥಾಪಿಸುವ ಮಾತು ಯಾಕೆ’ ಎಂದು ಚಲನಚಿತ್ರ ನಟ ಹಾಗೂ ನಿರ್ದೇಶಕ ಪ್ರಕಾಶ ಬೆಳವಾಡಿ ಪ್ರಶ್ನಿಸಿದರು.

‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಕುರಿತು ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಎಬಿವಿಪಿ, ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಸಂವಾದದಲ್ಲಿ, ಸಿನಿಮಾ ಹಿನ್ನೆಲೆ ಮತ್ತು ಮಹತ್ವದ ಕುರಿತು ಬಗ್ಗೆ ಮಾತನಾಡಿದರು.

‘ಭಾರತದಲ್ಲಿ ಕಾಶ್ಮೀರ್ ಫೈಲ್ಸ್‌ ರೀತಿಯ ನಿಗೂಢ ದುರಂತಗಳು ಸಾಕಷ್ಟಿವೆ. ಶ್ಯಾಮಪ್ರಸಾದ್ ಮುಖರ್ಜಿ ಅವರಂತಹ ವ್ಯಕ್ತಿಗಳ ನಿಗೂಢ ಸಾವಿನ ಸತ್ಯ ಜಗತ್ತಿಗೆ ಇನ್ನೂ ತಿಳಿದಿಲ್ಲ. ಇಂತಹ ದುರಂತಗಳು ಹಾಗೂ ನಿಗೂಢಗಳ ಬಗ್ಗೆಯೂ ಸಿನಿಮಾ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪಂಡಿತರು ಅನುಭವಿಸಿದ ಯಾತನೆಯನ್ನು ನಮ್ಮೆದುರಿಗೆ ತೆರೆದಿಡುವ ಚಲನಚಿತ್ರವು, ಕಾಶ್ಮೀರ ನಮ್ಮ ಅವಿಭಾಜ್ಯ ಎಂಬ ಭಾವನೆ ಮೂಡಿಸುತ್ತದೆ. ಕಾಶ್ಮೀರದಲ್ಲಿ ಆಗ ಇದ್ದ ಸರ್ಕಾರ ನಿಜವಾಗಿಯೂ ತನ್ನ ಕರ್ತವ್ಯವನ್ನು ನಿಭಾಯಿಸಿತ್ತೇ ಎಂಬ ಪ್ರಶ್ನೆಯನ್ನು ಸಿನಿಮಾದುದ್ದಕ್ಕೂ ಕಾಡುತ್ತದೆ’ ಎಂದರು.

‘ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ನೂರಾರು ಪಂಡಿತರ ಸಂದರ್ಶಿಸುವ ಜೊತೆಗೆ, ಸಾಕಷ್ಟು ಅಧ್ಯಯನ ಮಾಡಿ ಚಿತ್ರದ ಕಥೆ ಬರೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರು ಸಿನಿಮಾ ವೀಕ್ಷಿಸದೆ, ಒಂದು ಜನಾಂಗದ ಮೇಲೆ ನಡೆದ ಕ್ರೌರ್ಯವೇ ಸುಳ್ಳು ಎಂಬಂತೆ ಮಾತನಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವ್ಯವಸ್ಥೆ ತಿರಸ್ಕರಿಸಿದಾಗ ತೊಂದರೆ’: ‘ಯಾವುದೇ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಸಂಭವಿಸಿದಾಗ ವ್ಯವಧಾನ ಅಗತ್ಯ. ಸಣ್ಣಪುಟ್ಟ ಸಮಸ್ಯೆ ಆಯಿತೆಂದು ನಾವೇ ಕಟ್ಟಿಕೊಂಡ ವ್ಯವಸ್ಥೆ ತಿರಸ್ಕರಿಸಿದರೆ, ಹೆಚ್ಚು ತೊಂದರೆ ಅನುಭವಿಸುವುದು ನಾವೇ ಎಂಬ ಅರಿವು ಮುಖ್ಯ. ನಾವು ನಂಬಿರುವ ತತ್ವಕ್ಕೆ ಬದ್ಧರಾಗಿ ನಡೆಯುವಾಗ, ಅದಕ್ಕೆ ವಿರುದ್ಧವಾಗಿ ಎದುರಾಗುವ ಸತ್ಯ ಮತ್ತು ಸಾಕ್ಷಿಯನ್ನು ಸಹ ಒಪ್ಪಿಕೊಳ್ಳಬೇಕಾಗುತ್ತದೆ. ಅದಕ್ಕೆ ವಿಶಾಲ ಮನೋಭಾವ ಅಗತ್ಯ’ ಎಂದು ಪ್ರಕಾಶ ಬೆಳವಾಡಿ ಅಭಿಪ್ರಾಯಪಟ್ಟರು.

‘ಪಂಡಿತರ ಮೇಲೆ ನಡೆದಿರುವ ಕ್ರೌರ್ಯದ ಸತ್ಯವಾಗಿರುವುದರಿಂದಲೇ ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಪಂಡಿತರ ಬಗ್ಗೆ ಚರ್ಚೆ ನಡೆದಿದೆ. ಇದೀಗ ಪಂಡಿತರಿಗೆ ಪುನರ್‌ವ್ಯವಸ್ಥೆ ಒದಗಿಸುವ ಜೊತೆಗೆ ಸೂಕ್ತ ಭದ್ರತೆ, ಶಿಕ್ಷಣ, ಉದ್ಯೋಗ ಒದಗಿಸುವ ಕೆಲಸಗಳು ಆಗಬೇಕು’ ಎಂದರು.

ಪ್ರಜ್ಞಾ ಪ್ರವಾಹ ಕ್ಷೇತ್ರ ಸಂಯೋಜಕ ರಘುನಂದನ ಮಾತನಾಡಿ, ‘ನಮ್ಮ ಸುತ್ತಮುತ್ತ ಇರುವ ಸ್ಲೀಪರ್ ಸೆಲ್‌ಗಳ ಕುರಿತು ಎಚ್ಚರಿಕೆ ಅಗತ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅಲ್ಲದೆ, ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರವು ಭಾರತದ ಭಾಗವಾಗಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.