ADVERTISEMENT

125 ರೈಲ್ವೆ ನಿಲ್ದಾಣಗಳಲ್ಲಿ ವೈ–ಫೈ ಸೌಲಭ್ಯದ ಗುರಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 6:06 IST
Last Updated 19 ಜುಲೈ 2019, 6:06 IST

ಹುಬ್ಬಳ್ಳಿ: ಡಿಜಿಟಲ್‌ ಇಂಡಿಯಾ ಕನಸು ಸಾಕಾರಗೊಳಿಸುವ ಉದ್ದೇಶದಿಂದ ಮುಂದಿನ ಒಂದು ವರ್ಷದಲ್ಲಿ ತನ್ನ ವ್ಯಾಪ್ತಿಯ 125 ರೈಲ್ವೆ ನಿಲ್ದಾಣಗಳಲ್ಲಿ ವೈ–ಫೈ ಸೌಲಭ್ಯ ಕಲ್ಪಿಸಲು ನೈರುತ್ಯ ರೈಲ್ವೆ ಮುಂದಾಗಿದೆ.

ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 370 ನಿಲ್ದಾಣಗಳಿದ್ದು, 2016–18ರ ಅವಧಿಯಲ್ಲಿ ಕೈಗೊಂಡ ಮೊದಲ ಹಂತದ ಯೋಜನೆಯಲ್ಲಿ 153 ನಿಲ್ದಾಣಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಎರಡನೇ ಹಂತದಲ್ಲಿ 125 ಮತ್ತು ಮೂರನೇ ಹಂತದಲ್ಲಿ ಉಳಿದ ನಿಲ್ದಾಣಗಳಿಗೆ ವೈ–ಫೈ ಸಿಗಲಿದೆ.

‘ಹುಬ್ಬಳ್ಳಿ ವಿಭಾಗದ 40, ಬೆಂಗಳೂರು ವಿಭಾಗದ 58, ಮೈಸೂರು ವಿಭಾಗದ 55 ನಿಲ್ದಾಣಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಮಡಿಕೇರಿ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲಾ ಕೇಂದ್ರಗಳು, 2–ಟೈರ್‌ ನಗರಗಳಲ್ಲಿ ಮತ್ತು ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ವೈ–ಫೈ ಕಲ್ಪಿಸುವ ಗುರಿಯಿದೆ. ಸಮುದಾಯದ ಸಹಭಾಗಿತ್ವದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ’ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ADVERTISEMENT

ರೈಲ್ವೆ ನಿಲ್ದಾಣಗಳಲ್ಲಿ ವೈ–ಫೈ ಸೌಲಭ್ಯ ಕಲ್ಪಿಸುವ ಕಾರ್ಯಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಇದರ ಮೇಲೆ ನಿಗಾ ಇಟ್ಟಿದ್ದಾರೆ ಎಂದು ವಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.