ADVERTISEMENT

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿಯಿಂದಲೇ ಸ್ಪರ್ಧೆ –ಸಂತೋಷ್ ಲಾಡ್

ಸ್ಪರ್ಧಿ ಯಾರೆಂದು ಹೈಕಮಾಂಡ್ ನಿರ್ಧರಿಸಲಿದೆ: ಛಬ್ಬಿ ನಾಗರಾಜ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 9:35 IST
Last Updated 25 ನವೆಂಬರ್ 2021, 9:35 IST

ಹುಬ್ಬಳ್ಳಿ: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ತಮಗೆ ಟಿಕೆಟ್ ಸಿಗಲಿದೆ’ ಎಂದು ಮಾಜಿ ಶಾಸಕರೂ ಆದ ಸಂತೋಷ್ ಲಾಡ್ ಪುನರುಚ್ಛರಿಸಿದರೆ, ‘ಈ ಬಾರಿ ಪಕ್ಷ ನನಗೆ ಮಣೆ ಹಾಕಲಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ನಾಗರಾಜ ಛಬ್ಬಿ ಹೇಳಿದರು.

ನಗರದ ಮಹಾನಗರ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರೂ, ತಮಗೇ ಟಿಕೆಟ್ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಗೆ ತಯಾರಿ:‘ಕಲಘಟಗಿಯನ್ನು ಎರಡು ಸಲ ಪ್ರತಿನಿಧಿಸಿ ಸೋತಿರುವ ನಾನು, ಮತ್ತೆ ಅಲ್ಲಿನ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ವಿಷಯವನ್ನು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಸೋತರೂ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಕೋವಿಡ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಿಕೊಂಡು ಬಂದಿದ್ದೇನೆ. ಕೆಲ ತಿಂಗಳುಗಳಿಂದ ಚುನಾವಣೆಗೂ ತಯಾರಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಂತೋಷ್ ಲಾಡ್ ಹೇಳಿದರು.

ADVERTISEMENT

‘ಚುನಾವಣೆ ತಯಾರಿ ಮಾಡಿಕೊಳ್ಳಿ ಎಂದು ಪಕ್ಷದಿಂದ ನನಗೇನು ಭರವಸೆ ಸಿಕ್ಕಿಲ್ಲ. ಆದರೆ, ಕ್ಷೇತ್ರದ ಮಾಜಿ ಶಾಸಕನಾಗಿ ಮುಂದಿನ ಚುನಾವಣೆಗೆ ಅಣಿಯಾಗುವುದು ನನ್ನ ಕರ್ತವ್ಯ. ಸ್ನೇಹಿತ ನಾಗರಾಜ ಛಬ್ಬಿ ಕೂಡ ಟಿಕೆಟ್‌ಗೆ ಪ್ರಯತ್ನಿಸುತ್ತಿರುವುದು ತಪ್ಪಲ್ಲ. ಅವರ ಪ್ರಯತ್ನ ಅವರು ಮಾಡಲಿ. ನನ್ನ ಕರ್ತವ್ಯ ನಾನು ಮಾಡುವೆ’ ಎಂದರು.

‘ಬಳ್ಳಾರಿಯಲ್ಲಿ ಕೆ.ಸಿ. ಕೊಂಡಯ್ಯ ಅವರಿಗೆ ವಿಧಾನ ಪರಿಷತ್ ಟಿಕೆಟ್ ಕೊಟ್ಟಿರುವುದಕ್ಕೆ ಬೇಸರವಿಲ್ಲ. ಅವರ ಪರವಾಗಿ ಕೆಲಸ ಮಾಡುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಂಚಿನಿಂದಲೂ ಆಕಾಂಕ್ಷಿ:‘ಯಾರು ಸ್ಪರ್ಧಿಸಬೇಕೆಂದು ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಕೈಗೊಳ್ಳುತ್ತದೆ. ಲಾಡ್ ಅವರು ಬರುವುದಕ್ಕೆ ಮುಂಚಿನಿಂದಲೂ ನಾನು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಜನರೊಂದಿಗೆ ಸಂಪರ್ಕದಲ್ಲಿದ್ದು ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ, ಟಿಕೆಟ್ ಬಯಸಿದ್ದೇನೆ. ಈ ಸಲ ಬೇಗನೇ ಟಿಕೆಟ್ ಘೋಷಣೆಯಾಗಲಿದ್ದು, ನಮ್ಮಿಬ್ಬರಲ್ಲಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂದು ಸದ್ಯದಲ್ಲೇ ಗೊತ್ತಾಗಲಿದೆ’ ಎಂದು ನಾಗರಾಜ ಛಬ್ಬಿ ಹೇಳಿದರು.

‘ಬಳ್ಳಾರಿಯವರಾದ ಲಾಡ್ ಅವರು ಹರಪ್ಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದರೆ, ನಾನು ಕಲಘಟಗಿಯಿಂದ ಕಣಕ್ಕಿಳಿಯುವೆ. ಎರಡೂ ಕಡೆ ಗೆಲ್ಲುವುದರಿಂದ ಪಕ್ಷಕ್ಕೆ ಇಬ್ಬರು ಶಾಸಕರು ಸಿಕ್ಕಂತಾಗುತ್ತದೆ. ಈ ಕುರಿತು ಸ್ನೇಹಿತ ಲಾಡ್ ಅವರಿಗೆ ಮನವಿ ಮಾಡುವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.