
ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಚಾಲುಕ್ಯ ನಗರದಲ್ಲಿ ನಡೆದ ಮಹಿಳೆ ವಿವಸ್ತ್ರ ಪ್ರಕರಣ ಶುಕ್ರವಾರವೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಯಿತು.
ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರು ವ್ಯಕ್ತಿಗೆ ಹಲ್ಲೆ ನಡೆಸಿರುವ ವಿಡಿಯೊವನ್ನು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ‘ಮಾನ ಮರ್ಯಾದೆ ಇದ್ದರೆ ಬಿಜೆಪಿ, ರಾಕ್ಷಸೀ ಮನಸ್ಥಿತಿ, ಅಪರಾಧ ಹಿನ್ನೆಲೆಯ ಮಹಿಳೆ ಪರ ಪ್ರತಿಭಟಿಸಬಾರದು’ ಎಂದು ಆಗ್ರಹಿಸಿದರು.
‘ಪ್ರಕರಣ ಶಾಸಕ ಮಹೇಶ ಟೆಂಗಿನಕಾಯಿ ಅವರ ಟೂಲ್ ಕಿಟ್ ಆಗಿದ್ದು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಮೇಲೆ ಕಣ್ಣಿಟ್ಟು, ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ’ ಎಂದೂ ಸಹ ಆರೋಪಿಸಿದರು. ಶಾಸಕ ವಿರುದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಘಟಕವು ಪೊಲೀಸ್ ಕಮಿಷನರ್‌ಗೂ ದೂರು ನೀಡಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋವನ್ನೇ ಪ್ರತ್ಯಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ನಾಯಕರು, ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ:
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ‘ಮಹಿಳೆ ವಿವಸ್ತ್ರ ಪ್ರಕರಣದ ತನಿಖೆಗೂ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಿಳೆಯೇ ವಿವಸ್ತ್ರವಾಗಿದ್ದಾಳೆ ಎಂದು ಹೇಳಿಕೆ ನೀಡುತ್ತಾರೆ. ಅವರೇನು ತನಿಖಾಧಿಕಾರಿಯೇ, ಅಥವಾ ನ್ಯಾಯಾಮೂರ್ತಿಯೇ’ ಎಂದು ಪ್ರಶ್ನಿಸಿದರು.
‘ಆರೋಪ ಬಂದಾಗ ತನಿಖೆ ನಡೆಸಬೇಕು. ವಿಚಾರಣೆ ಬಳಿಕ ತಪ್ಪಿತಸ್ಥರು ಯಾರೆಂದು ನಿರ್ಧಾರ ಆಗಲಿದೆ. ಆದರೆ ಇದ್ಯಾವುದೂ ನಡೆಯದೇ ಪೊಲೀಸರು ಸಹ ಮಹಿಳೆಯೇ ವಿವಸ್ತ್ರವಾಗಿದ್ದಾರೆ ಎಂದು ಹೇಳಿಕೆ ನೀಡುತ್ತಾರೆ. ಮೊದಲು ಸರ್ಕಾರದ ವರದಿ, ನಂತರ ತನಿಖಾ ವರದಿಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್‌ನಲ್ಲಿ ಮಹಿಳೆಗೆ ರಕ್ಷಣೆಯಿಲ್ಲ. ಯಾರ ವಿಡಿಯೊ ಯಾವಾಗ ಹೊರಬೀಳುತ್ತದೆ ಗೊತ್ತಿಲ್ಲ. ಆ ಪಕ್ಷದ ಮಹಿಳಾ ಕಾರ್ಯಕರ್ತರು ಎಚ್ಚರದಿಂದ ಇರಬೇಕು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದರು. ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.