ADVERTISEMENT

ವರ್ಷವಾದರೂ ಆರಂಭವಾಗದ ಕಾಮಗಾರಿ

ಖೇಲೊ ಇಂಡಿಯಾ ಯೋಜನೆಯಲ್ಲಿ ಮಂಜೂರಾಗಿರುವ ಕ್ರೀಡಾಸಂಕೀರ್ಣ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 13:34 IST
Last Updated 10 ಸೆಪ್ಟೆಂಬರ್ 2019, 13:34 IST

ಹುಬ್ಬಳ್ಳಿ: ಸ್ಥಳೀಯ ಕ್ರೀಡಾಪಟುಗಳಿಗೆ ಸ್ಥಳೀಯವಾಗಿಯೇ ಗುಣಮಟ್ಟದ ತರಬೇತಿ ಸಿಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ 2018ರಲ್ಲಿ ಖೇಲೊ ಇಂಡಿಯಾ ಯೋಜನೆಯಲ್ಲಿ ಜಿಲ್ಲೆಗೆ ಮಂಜೂರು ಮಾಡಿದ್ದ ಕ್ರೀಡಾ ಸಂಕೀರ್ಣ ನಿರ್ಮಾಣದ ಕಾಮಗಾರಿ ವರ್ಷವಾದರೂ ಆರಂಭವಾಗಿಲ್ಲ.

ಗೋಕುಲ ರಸ್ತೆಯ ತಾರಿಹಾಳದಲ್ಲಿ ಒಟ್ಟು 13 ಎಕರೆ ಜಾಗದಲ್ಲಿ ಕ್ರೀಡಾಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ.ಪಿಡಬ್ಲ್ಯುಡಿ ಕಾಮಗಾರಿಯ ಹೊಣೆ ಹೊತ್ತಿದೆ. ಪಾಲಿಕೆಯಿಂದ ಜಾಗ ಕೂಡ ಮಂಜೂರಾಗಿದೆ.

ಅಥ್ಲೆಟಿಕ್‌ ಟ್ರ್ಯಾಕ್‌, ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಟೆನಿಸ್‌, ಹ್ಯಾಂಡ್‌ಬಾಲ್‌, ಕರಾಟೆ ಮತ್ತು ಆರ್ಚರಿ ಸೇರಿದಂತೆ ಇನ್ನಿತರ ಪ್ರಮುಖ ಕ್ರೀಡಾ ತರಬೇತಿಗೆ ಒಂದೇ ಸೂರಿನಲ್ಲಿ ಸೌಲಭ್ಯ ಕಲ್ಪಿಸುವುದು ಖೇಲೊ ಇಂಡಿಯಾದ ಉದ್ದೇಶ.

ADVERTISEMENT

ಖೇಲೊ ಇಂಡಿಯಾ ಹಾಗೂ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ನಡೆಸುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಗ್ರಾಮೀಣ ಭಾಗದ ಕ್ರೀಡಾಪಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲುತ್ತಿದ್ದಾರೆ. ಅವರಿಗೆ ಸ್ಥಳೀಯವಾಗಿ ಸೌಲಭ್ಯಗಳನ್ನು ಕಲ್ಪಿಸಿ ಇನ್ನಷ್ಟು ಎತ್ತರದ ಸಾಧನೆಗೆ ನೆರವಾಗುವುದುಈ ಯೋಜನೆಯ ಆಶಯ. ಆದರೆ, ಅನುದಾನ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಕಾಮಗಾರಿ ಆರಂಭವಾಗದಿರುವುದು ಕ್ರೀಡಾಪಟುಗಳ ಬೇಸರಕ್ಕೆ ಕಾರಣವಾಗಿದೆ.

ಯೋಜನೆ ಮಂಜೂರಾದ ಆರಂಭದಲ್ಲಿಒಟ್ಟು ₹ 13ರಿಂದ ₹ 16 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಕಾಮಗಾರಿ ಆರಂಭಿಸಲುಮೊದಲ ಹಂತದಲ್ಲಿ ರಾಜ್ಯ ಸರ್ಕಾರ₹ 3 ಕೋಟಿ ಕೂಡ ಬಿಡುಗಡೆ ಮಾಡಿದೆ. ಆದರೆ ಈಗ ಇನ್ನಷ್ಟು ಹಣ ತಂದ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಪಟ್ಟು ಹಿಡಿದಿದ್ದಾರೆ.

ಕಾಮಗಾರಿ ಆರಂಭಕ್ಕೆ ಆಗ್ರಹ:

ಅಥ್ಲೆಟಿಕ್‌ ಹಾಗೂ ಇನ್ನಿತರ ಕ್ರೀಡಾಚಟುವಟಿಕೆಗಳಿಗೆ ವೃತ್ತಿಪರ ತರಬೇತಿ ಪಡೆಯಲು ಜಿಲ್ಲೆಯಲ್ಲಿ ಸರಿಯಾದ ಸೌಲಭ್ಯವಿಲ್ಲ. ಟ್ರ್ಯಾಕ್‌ ಮೇಲೆ ಅಥ್ಲೆಟಿಕ್‌ ಅಭ್ಯಾಸ ಮಾಡಲು ಧಾರವಾಡಕ್ಕೆ ಹೋಗಬೇಕು. ಹೀಗಾದರೆ ಹುಬ್ಬಳ್ಳಿ ಹಾಗೂ ಜಿಲ್ಲೆಯ ಉಳಿದ ತಾಲ್ಲೂಕುಗಳ ಅಥ್ಲೀಟ್‌ಗಳು ಅಭ್ಯಾಸಕ್ಕೆ ಎಲ್ಲಿಗೆ ಹೋಗಬೇಕು? ಆದಷ್ಟು ಬೇಗನೆ ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದುಅಥ್ಲೆಟಿಕ್‌ ಕೋಚ್‌ ವಿಲಾಸ ನೀಲಗುಂದ ಆಗ್ರಹಿಸಿದ್ದಾರೆ.

’ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ ಸೌಲಭ್ಯವಿಲ್ಲದ ಕಾರಣ ಅವರು ಬೇರೆ ಕಡೆ ಹೋಗುತ್ತಿದ್ದಾರೆ. ಅನೇಕ ಸಲ ಮಣ್ಣಿನಲ್ಲಿ ಓಡಿ ಅಭ್ಯಾಸ ಮಾಡಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಟ್ರ್ಯಾಕ್‌ನಲ್ಲಿ ಓಡಬೇಕಾದ ಪರಿಸ್ಥಿತಿಯಿದೆ. ಎರಡ್ಮೂರು ವರ್ಷಗಳಲ್ಲಿ ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್‌ನಿಂಥ ಮಹತ್ವದ ಕ್ರೀಡಾ ಟೂರ್ನಿಗಳಿವೆ. ಆದರೂ, ಕಾಮಗಾರಿ ಆರಂಭಿಸಲು ತಡ ಮಾಡುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.