ADVERTISEMENT

ಹುಬ್ಬಳ್ಳಿ: ಅಖಾಡದಲ್ಲಿ ಪೈಲ್ವಾನರ ಜಿದ್ದಾಜಿದ್ದು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:59 IST
Last Updated 7 ಏಪ್ರಿಲ್ 2022, 4:59 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಹಣಾಹಣಿಯ ನೋಟ
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಹಣಾಹಣಿಯ ನೋಟ   

ಹುಬ್ಬಳ್ಳಿ: ಇಲ್ಲಿನ ಉಣಕಲ್‌ ಸಿದ್ದಪ್ಪಜ್ಜನ ಜಾತ್ರೆಯ ಅಂಗವಾಗಿ ಬುಧವಾರ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಜಿದ್ದಾಜಿದ್ದಿಗೆ ಪ್ರೇಕ್ಷಕರು ಮನಸೋತರು.

ಜಾತ್ರೆ ನಡೆಯುವಾಗ ಪ್ರತಿ ವರ್ಷವೂ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸ್ಪರ್ಧೆಗಳು ನಡೆದಿರಲಿಲ್ಲ. ಆದ್ದರಿಂದ ಈ ಬಾರಿ ನಡೆದ ಜಿದ್ದಾಜಿದ್ದಿಗೆ ಸಾವಿರಾರು ಕುಸ್ತಿ ಪ್ರೇಮಿಗಳು ಸಾಕ್ಷಿಯಾದರು. ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ನೆರೆರಾಜ್ಯಗಳ ಕುಸ್ತಿಪಟುಗಳು ಹಾಕಿದ ಪಟ್ಟುಗಳು ಗಮನ ಸೆಳೆದವು.

ಎಂಟು ವರ್ಷದ ಬಾಲಕರಿಂದ ಹಿಡಿದು ಪುರುಷರ ತನಕ ವಿವಿಧ ವಯೋಮಾನದ ಪೈಲ್ವಾನರಿಗೆ ಸ್ಪರ್ಧೆಗಳು ನಡೆದವು. ಮೊದಲ ನಾಲ್ಕು ಸಂಖ್ಯೆಗಳ ಕುಸ್ತಿಯ ವೇಳೆ ಸ್ಪರ್ಧಿ ಹಾಗೂ ಪ್ರತಿಸ್ಪರ್ಧಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದಾಗ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಉಣಕಲ್‌ ಗ್ರಾಮದ ಹಿರಿಯ ಪೈಲ್ವಾನರು ಹಗೂ ಕುಸ್ತಿ ಪ್ರೇಮಿಗಳು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಪಂದ್ಯಗಳನ್ನು ಕಟ್ಟಿದರು. ಇದರಿಂದ ಪ್ರತಿ ಸ್ಪರ್ಧೆಗಳು ರಂಗೇರಿದ್ದವು.

ADVERTISEMENT

ಮೊದಲ ಬಹುಮಾನ ₹21 ಸಾವಿರ, ದ್ವಿತೀಯ ₹15 ಸಾವಿರ, ಮೂರನೇ ₹10 ಸಾವಿರ ಮತ್ತು ನಾಲ್ಕನೇ ₹5,000 ವಿಜೇತರಿಗೆ ನೀಡಲಾಯಿತು.

ಚನ್ನು ಪಾಟೀಲ, ಸಿದ್ದಪ್ಪಜ್ಜ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸದಸ್ಯ ರಾಜಣ್ಣ ಕೊರವಿ, ರಮೇಶ ಕಾಂಬಳೆ, ಪರಶುರಾಮ ಹೊಂಬಳ, ಅಶೋಕ ಚಿಲ್ಲಣ್ಣವರ, ಶಂಕರಸಿಂಗ್ ಹಜೇರಿ, ಗುರುರಾಜ ಸೂರ್ಯವಂಶಿ, ಸಿದ್ದು ಪರಣ್ಣಬರ, ಕಲ್ಮೇಶ ಹೊಂಬಳ, ವಿಠಲ್ ಹಜೇರಿ, ಸುರೇಶ ಬಾಗಮ್ಮವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.