ADVERTISEMENT

ಯುವಕರು ಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣ ಬಳಸಿ: ಲೋಕೇಶ ಬಿ. ಜಗಲಾಸರ್

ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ. ಜಗಲಾಸರ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 1:52 IST
Last Updated 27 ಆಗಸ್ಟ್ 2022, 1:52 IST
ಲೋಕೇಶ ಬಿ. ಜಗಲಾಸರ್
ಲೋಕೇಶ ಬಿ. ಜಗಲಾಸರ್   

ಧಾರವಾಡ: ‘ಸಾಮಾಜಿಕ ಜಾಲತಾಣಗಳಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವವರ ಮೇಲೆ ನಿಗಾ ಇಡಲು ವಿಶೇಷ ಘಟಕ ಸ್ಥಾಪಿಸಲಾಗಿದೆ. ಮುಖ್ಯವಾಗಿ ಯುವಕರು ಸಾಮಾಜಿಕ ತಾಣವನ್ನು ಜವಾಬ್ದಾರಿಯುತವಾಗಿ ಬಳಸಬೇಕು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜಗಲಾಸರ್ ಹೇಳಿದರು.

ಧಾರವಾಡ ಜರ್ನಲಿಸ್ಟ್ ಗಿಲ್ಡ್‌ ವತಿಯಿಂದ ಶುಕ್ರವಾರ ಆಯೋಜಿಸಲಾದ ‘ಮೀಟ್‌ ದಿ ಪ್ರೆಸ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಾಂತಿ ಭಂಗ ಅಥವಾ ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯಾಗುವಂತೆ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ
ಕೊಂಡವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಹೀಗೆ ಪ್ರಕರಣ ದಾಖಲಾದರೆ ಮುಂದೆ ನೌಕರಿಗೆ ಸೇರಲು ಸಮಸ್ಯೆ ಎದುರಾಗಬಹುದು.ಹೀಗಾಗಿ,ಪಾಲಕರೂ ಯುವಕರಿಗೆ ಅನಗತ್ಯ ಸಮಸ್ಯೆಗೆ ಸಿಲುಕದಂತೆ ಮಾರ್ಗದರ್ಶನ ಮಾಡಬೇಕು’ ಎಂದರು.

ADVERTISEMENT

‘ಸದ್ಯ ಗಣೇಶ ಹಬ್ಬದ ಸಂದರ್ಭದಲ್ಲಿ ಡಿಜೆ ಬಳಸುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಈ ನಿಯಮ ಗಣೇಶ ಹಬ್ಬಕ್ಕೆ ಮಾತ್ರವಲ್ಲ ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳಿಗೂ ಅನ್ವಯಿಸಲಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಡಿಜೆ ಪೂರೈಕೆದಾರರ ಸಭೆ ನಡೆಸಿ ಕಾನೂನಿನ ಕುರಿತು ಹೇಳಲಾಗಿದೆ. ನಿಗದಿಗಿಂತ ಹೆಚ್ಚಿನ ಡೆಸಿಬಲ್ ಶಬ್ದ ಹೊರಯೊಮ್ಮಿಸುವ ಡಿಜೆ ಬಳಸಿದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಇದಕ್ಕಾಗಿ ಅಧಿಕಾರಿಗಳಿಗೆ ಡೆಸಿಬಲ್ ಮೀಟರ್‌ ಸಹ ನೀಡಲಾಗಿದೆ’ ಎಂದು ಹೇಳಿದರು.

‘ಇಲಾಖೆಯಲ್ಲಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಎಸ್‌ಪಿ ಕಚೇರಿ ಸೇರಿದಂತೆ ಹೆಚ್ಚುವರಿಯಾಗಿದ್ದ ಸಿಬ್ಬಂದಿಯನ್ನು ಠಾಣೆಗಳಿಗೆ ನಿಯೋಜಿಸುವ ಕೆಲಸ ಆಗಿದೆ. ಗೃಹ ರಕ್ಷಕ ದಳಕ್ಕೆ ಹೊಸದಾಗಿ 170 ಜನರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಇವರ ಸಂಖ್ಯೆ 800 ಆಗಲಿದೆ. ಹಾಗೆಯೇ ವಾಸಯೋಗ್ಯವಲ್ಲದ ವಸತಿ ಸಮುಚ್ಚಯಗಳನ್ನು ಕೆಡವಿ, ಹೊಸ ಕಟ್ಟಡ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಅಳ್ನಾವರದ ಪೊಲೀಸ್ ಕ್ವಾರ್ಟರ್ಸ್‌, ಠಾಣೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಶ್ವಾನ ದಳಕ್ಕೂ ಪ್ರತ್ಯೇಕ ಕೊಠಡಿ ಮತ್ತು ಡಿಎಆರ್‌ಗೂ ಹೊಸ ಕಟ್ಟಡ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ’ ಎಂದು ಜಗಲಾಸರ್ ತಿಳಿಸಿದರು.

‘ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲಾಗಿದ್ದು, ಗಣನೀಯವಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೆಯೂ ಇಂಥ ಯಾವುದೇ ಪ್ರಕರಣಗಳ ಮಾಹಿತಿ ಲಭ್ಯವಾದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದರು.

‘ಮೃತ್ಯುಕೂಪವಾಗಿರುವ ಬೈಪಾಸ್‌ನಲ್ಲಿ ಅಪಘಾತ ಸಂಖ್ಯೆ ಕಡಿಮೆ ಮಾಡಲು ಈ ಹಿಂದೆ ವಾಹನಗಳನ್ನು ನಿಲ್ಲಿಸಿ, ಬಿಡುವ ಪ್ರಯೋಗ ನಡೆಸಿದ್ದು, ಅದು ಯಶಸ್ವಿಯಾಗಿತ್ತು. ಕೆಲವೇ ದಿನಗಳಲ್ಲಿ ಅದನ್ನು ಮರಳಿ ಜಾರಿಗೆ ತರಲಾಗುವುದು. ಬೈಪಾಸ್‌ನಲ್ಲಿ ಎರಡರಿಂದ ಮೂರು ಸ್ಥಳಗಳಲ್ಲಿ ಇಂಥ ಸ್ಥಳಗಳನ್ನು ಗುರುತಿಸಿ ನಿರಂತರವಾಗಿ ಈ ಪ್ರಕ್ರಿಯೆ ನಡೆಸಲಾಗುವುದು’ ಎಂದು ಲೋಕೇಶ ಜಗಲಾಸರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.