ಹುಬ್ಬಳ್ಳಿ: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಜಾರಿಗೆ ತರಲಾದ ‘ಯುವನಿಧಿ ಪ್ಲಸ್’ ಕೌಶಲಾಭಿವೃದ್ಧಿ ತರಬೇತಿಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎರಡು ವರ್ಷಗಳಲ್ಲಿ ಪದವಿ, ಡಿಪ್ಲೊಮಾ ಪೂರೈಸಿದ ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ‘ಯುವನಿಧಿ’ ಯೋಜನೆ ಜಾರಿಗೆ ತಂದಿದೆ. ಪದವೀಧರರಿಗೆ ₹3,000, ಡಿಪ್ಲೊಮಾ ಪಡೆದವರಿಗೆ ₹1,500 ನಿರುದ್ಯೋಗ ಭತ್ಯೆ ಇದೆ. ಈ ಫಲಾನುಭವಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ವಿವಿಧ ಕೌಶಲಾಧಾರಿತ ಕೋರ್ಸ್‌ಗಳನ್ನು ಆರಂಭಿಸಿದ್ದರೂ, ನಿರೀಕ್ಷಿತ ಸಂಖ್ಯೆಯಲ್ಲಿ ಫಲಾನುಭವಿಗಳು ತರಬೇತಿ ಪಡೆಯುತ್ತಿಲ್ಲ.
ಜಿಲ್ಲೆಯಲ್ಲಿ ಒಟ್ಟು 8,187 ಯುವನಿಧಿ ಫಲಾನುಭವಿಗಳಿದ್ದಾರೆ. ಆದರೆ, ಇವರಲ್ಲಿ 142 ಮಂದಿ ಮಾತ್ರ ಕೌಶಲಾಧಾರಿತ ಕೋರ್ಸ್‌ಗಳ ತರಬೇತಿ ಪಡೆದಿದ್ದಾರೆ. ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ), ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ), ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ 14 ಸಂಸ್ಥೆಗಳಿಂದ ತರಬೇತಿ ನೀಡಲಾಗುತ್ತಿದೆ.
‘ಯುವನಿಧಿ ಪ್ಲಸ್’ ಕೌಶಲ ತರಬೇತಿಗೆ 3,543 ಯುವನಿಧಿ ಫಲಾನುಭವಿಗಳ ಕೌನ್ಸೆಲಿಂಗ್ ನಡೆದಿದೆ. ಆದರೆ, ಇದರಲ್ಲಿ ಬಹುತೇಕರು ಕೌಶಲ ತರಬೇತಿ ಪಡೆಯಲು ಹಿಂಜರಿಯುತ್ತಾರೆ. ಕೌಶಲ ತರಬೇತಿ ಪಡೆದರೆ, ನಿರುದ್ಯೋಗ ಭತ್ಯೆ ಸ್ಥಗಿತಗೊಳ್ಳಲಿದೆ ಎಂಬ ತಪ್ಪು ಕಲ್ಪನೆ ಅವರಲ್ಲಿದೆ. ಇಲ್ಲಿ ತರಬೇತಿ ಪಡೆದರೂ ಫಲಾನುಭವಿಗಳಿಗೆ ಎರಡು ವರ್ಷ ನಿರುದ್ಯೋಗ ಭತ್ಯೆ ಸಿಗಲಿದೆ’ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ತಿಳಿಸಿದರು.
‘ಜಿಲ್ಲೆಯಲ್ಲಿ ‘ಯುವನಿಧಿ ಪ್ಲಸ್’ ಅಡಿ 734 ಫಲಾನುಭವಿಗಳಿಗೆ ಕೌಶಲ ತರಬೇತಿಯ ಗುರಿ ಹೊಂದಲಾಗಿದ್ದು, 142 ಮಂದಿ ತರಬೇತಿ ಪಡೆದಿದ್ದಾರೆ. ‘ಯುವನಿಧಿ’ ಫಲಾನುಭವಿಗಳೆಲ್ಲರೂ ತರಬೇತಿ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಬಹುತೇಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಕೌಶಲ ತರಬೇತಿ ಪಡೆದ ಅನೇಕರು ಉದ್ಯೋಗಾವಕಾಶ ಪಡೆದಿದ್ದಾರೆ. ಅವರಲ್ಲಿ, ಇಬ್ಬರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ ಹೆಸರಾಂತ ಸಂಸ್ಥೆಗಳಿಂದ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.
8,370 ಮಂದಿ ನೋಂದಣಿ
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಾಹಿತಿ ಪ್ರಕಾರ, ಜುಲೈ 31ರವರೆಗೆ 8,370 ಮಂದಿ ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜೂನ್ 30ರವರೆಗೆ 3,078 ಪುರುಷರು ಹಾಗೂ 3,873 ಮಹಿಳೆಯರು ಸೇರಿ ಒಟ್ಟು 6,951 ಮಂದಿ ಯೋಜನೆಯ ಫಲಾನುಭವಿಗಳಿದ್ದಾರೆ.
‘6,780 ಪದವಿ ಹಾಗೂ 171 ಮಂದಿ ಡಿಪ್ಲೊಮಾ ಪಡೆದ ಫಲಾನುಭವಿಗಳಿದ್ದಾರೆ. ಯೋಜನೆಗೆ ನೋಂದಣಿ ಮಾಡಿದ 1,419 ಮಂದಿಯ ದಾಖಲೆ ಪತ್ರಗಳು ಪರಿಶೀಲನೆ ಹಂತದಲ್ಲಿವೆ. ಈವರೆಗೆ ಪದವಿ ಪಡೆದ ಫಲಾನುಭವಿಗಳಿಗೆ ₹12,56,43,000 ಹಾಗೂ ಡಿಪ್ಲೊಮಾ ಫಲಾನುಭವಿಗಳಿಗೆ ₹12,78,000 ಸೇರಿ ಒಟ್ಟು ₹12,69,21,000 ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ’ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಸಹಾಯಕ ಉದ್ಯೋಗ ಅಧಿಕಾರಿ ಎಂ.ಎಂ. ಕುದರಗೊಂಡ ತಿಳಿಸಿದರು.
‘ಯುವನಿಧಿ’ ಫಲಾನುಭವಿಗಳು ಕೌಶಲಾಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿ ಪಡೆಯಬೇಕು. ಈ ಮೂಲಕ ಉದ್ಯೋಗಾವಕಾಶ ಪಡೆಯಲು ಹಾಗೂ ಸ್ವ– ಉದ್ಯೋಗ ಆರಂಭಿಸಲು ಅನುಕೂಲ ಆಗಲಿದೆ.– ರವೀಂದ್ರ ದ್ಯಾಬೇರಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.