ADVERTISEMENT

ಪರಿಸರಸ್ನೇಹಿ ಹಣತೆ ಬಳಕೆಗೆ ರಾಷ್ಟ್ರೋತ್ಥಾನ ಪರಿಷತ್ ಮನವಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 4:25 IST
Last Updated 16 ಅಕ್ಟೋಬರ್ 2020, 4:25 IST
   

ಬೆಂಗಳೂರು: ಚೀನಾ ವಸ್ತುಗಳ ಬದಲು ಸೆಗಣಿಯಿಂದ ತಯಾರಿಸಿದ ಪರಿಸರಸ್ನೇಹಿ ಹಣತೆಗಳನ್ನು ಬಳಸುವ ಮೂಲಕ ಈ ಬಾರಿಯ ದೀಪಾವಳಿ ಹಬ್ಬವನ್ನು ಆಚರಿಸುವಂತೆ ರಾಷ್ಟ್ರೋತ್ಥಾನ ಪರಿಷತ್ ಮನವಿ ಮಾಡಿಕೊಂಡಿದೆ.

‘ರಾಷ್ಟ್ರೀಯ ಕಾಮಧೇನು ಆಯೋಗವು ದೇಶದಾದ್ಯಂತ ಸೆಗಣಿಯಿಂದ ತಯಾರಿಸಿದ ಹಣತೆಯ ಮೂಲಕ ದೀಪಾವಳಿ ಆಚರಿಸುವ ‘ಕಾಮಧೇನು ದೀಪಾವಳಿ’ ಎಂಬ ಬೃಹತ್ ಆಂದೋಲನ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ರಾಷ್ಟ್ರೋತ್ಥಾನ ಪರಿಷತ್ ಕೈಜೋಡಿಸಿದೆ. ಗೋವಿನ ಸೆಗಣಿಯನ್ನು ಬಳಸಿ ಕೊಂಡು 20 ಸಾವಿರಕ್ಕೂ ಅಧಿಕದೀಪಗಳನ್ನು ತಯಾರಿಸಿ, ಸಾರ್ವಜನಿಕರಿಗೆ ನೀಡಲಾಗುವುದು’ ಎಂದು ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ತಿಳಿಸಿದ್ದಾರೆ.

‘ಆಯೋಗವು ದೇಶದಾದ್ಯಂತ 33 ಕೋಟಿ ದೀಪಗಳನ್ನು ತಯಾರಿಸುವ ಗುರಿ ಹೊಂದಿದೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಸೆಗಣಿಯಿಂದ ತಯಾರಿಸಿದ 3 ಲಕ್ಷ ದೀಪಗಳು ಹಾಗೂ ವಾರಣಾಸಿಯಲ್ಲಿ 1 ಲಕ್ಷ ದೀಪಗಳನ್ನು ಹಚ್ಚಲು ಆಯೋಗವು ನಿರ್ಧರಿಸಿದೆ. ಇದೇ ರೀತಿ, ಮನೆಗಳು ಹಾಗೂ ದೇವಾಲಯಗಳಲ್ಲಿ ಸೆಗಣಿಯಿಂದ ತಯಾರಿಸಿದ ದೀಪಗಳಿಂದ ದೀಪಾವಳಿ ಆಚರಿಸಬೇಕಿದೆ. ಈ ಬಾರಿಯ ದೀಪಾವಳಿಯಲ್ಲಿ ಸೆಗಣಿ ಹಾಗೂ ಪಂಚಗವ್ಯವನ್ನು ವ್ಯಾಪಕವಾಗಿ ಬಳಸುವ ಮೂಲಕ ಸ್ವಚ್ಛ ಮತ್ತು ಆರೋಗ್ಯಪೂರ್ಣ ದೀಪಾವಳಿ ಆಚರಿಸೋಣ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.