ADVERTISEMENT

ಉತ್ತರ ಕರ್ನಾಟಕ ರೈತ ಸಂಘದಿಂದ ಸುವರ್ಣ ಸೌಧಕ್ಕೆ ಮುತ್ತಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 12:07 IST
Last Updated 22 ನವೆಂಬರ್ 2018, 12:07 IST
ಸಂಪೂರ್ಣ ಸಾಲ ಮನ್ನಾ, ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ ಸದಸ್ಯರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ  ಗುರುವಾರ ಬೃಹತ್ ‍ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ
ಸಂಪೂರ್ಣ ಸಾಲ ಮನ್ನಾ, ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ ಸದಸ್ಯರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ  ಗುರುವಾರ ಬೃಹತ್ ‍ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಸಂಪೂರ್ಣ ಸಾಲ ಮನ್ನಾ, ಕಬ್ಬು ಬಾಕಿ ಪಾವತಿ, ವೈಜ್ಞಾನಿಕ ಬೆಲೆ ನಿಗದಿ ಹಾಗೂ ಹೆಸರು, ಕಡಲೆ, ಈರುಳ್ಳಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದ ಸದಸ್ಯರು ನಗರದಲ್ಲಿ ಗುರುವಾರ ಬೃಹತ್ ‍ಪ್ರತಿಭಟನೆ ನಡೆಸಿದರು.

ಬೆಳಗಾವಿ ಅಧಿವೇಶನಕ್ಕೂ ಮೊದಲೇ ಎಲ್ಲ ಬೇಡಿಕೆ ಈಡೇರಿಸದಿದ್ದರೆ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದರು. ಮನವಿ ಸ್ವೀಕರಿಸಲು ಪ್ರಾದೇಶಿಕ ಆಯುಕ್ತರು ಬಾರದಿರುವುದಕ್ಕೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಪೊಲೀಸರು ಬಂಧಿಸಿದರೂ ಸರಿ ಆಯುಕ್ತರು ಬರುವ ವರೆಗೆ ಸ್ಥಳದಿಂದ ಕದಲುವುದಿಲ್ಲ’ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ರೈತರ ಮನವೊಲಿಸಿದರು.

ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಮಾತನಾಡಿ, ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹೋರಾಟ ನಡೆಸಿದ ವೇಳೆ ಎಲ್ಲ ಮುಖಂಡರ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಈ ವರೆಗೂ ಸಭೆ ಕರೆದು ಸಮಸ್ಯೆ ಕೇಳುವ, ಅದನ್ನು ಪರಿಹರಿಸುವ ಕೆಲಸ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಸತತ ನಾಲ್ಕು ವರ್ಷಗಳಿಂದ ಬರಗಾಲ ಇರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಈ ಭಾಗದ ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಸಹಕಾರ ಸಂಘಗಳಲ್ಲಿ ಮಹಿಳೆಯರು ಮಾಡಿರುವ ಸಾಲವನ್ನು ಸಹ ಮನ್ನಾ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಹನುಮನಹಳ್ಳಿ ಶಿವಾನಂದ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ‘ಈರುಳ್ಳಿ ಮತ್ತು ಹೆಸರುಕಾಳಿಗೆ ಬೆಲೆ ಸಿಗದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹೆಸರು ಖರೀದಿ ಮಾಡಿದ್ದರೂ ಅದರ ಹಣವನ್ನು ನೀಡಿಲ್ಲ. ಉತ್ತರ ಕರ್ನಾಟಕದಿಂದ ಏನು ಲಾಭ ಎಂದು ಮುಖ್ಯಮಂತ್ರಿ ಕೇಳುತ್ತಾರೆ. ಜೋಳ, ಗೋಧಿ, ಮೆಣಸಿನಕಾಯಿ ಉತ್ತರ ಕರ್ನಾಟಕದಿಂದಲೇ ಸರಬರಾಜು ಆಗುವುದು ಎಂಬುದನ್ನು ಮರೆಯಬಾರದು. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವ ಅವರಿಗೆ ಸರಿಯಾದ ಜ್ಞಾನ ಇಲ್ಲ. ಕೇವಲ ಡ್ರಾಮಾ ಮಾಡಿದರೆ ಸಾಲದು, ರೈತರ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ರಾಜವಿದ್ಯಾಶ್ರಮದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ‘ರೈತರನ್ನು ಗೂಂಡಾಗಳು ಎನ್ನುತ್ತಿರುವ ಮುಖ್ಯಮಂತ್ರಿಗೆ ನಾಲಗೆ ಮೇಲೆ ಹಿಡಿತ ಇಲ್ಲವಾಗಿದೆ. ಈ ಭಾಗದ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಪ್ರತ್ಯೇಕ ರಾಜ್ಯ ನೀಡಲಿ. ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಿದ್ಧಾರೂಢ ಮಠದಿಂದ ಚನ್ನಮ್ಮ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕೃತಿಗೆ ಹೂವಿನ ಹಾರ ಹಾಕಿ, ಮಂತ್ರ ಹೇಳಿ ತಿಥಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ, ಉಪಾಧ್ಯಕ್ಷ ಸೋಮಶೇಖರ ಬರಗುಂಡಿ, ಮುಖಂಡರಾದ ಶಂಕರ ಅಂಬಲಿ, ಮಧುಸೂದನ್ ತಿವಾರಿ, ವೀರಪ್ಪ ಕುಸುಗಲ್, ಕವಿತಾ ಮಾಲಿಪಾಟೀಲ್, ರತ್ನಬಾಯಿ ಪಾಟೀಲ್, ಲಕ್ಷ್ಮಿಜಿಗಳೂರು, ಶಕುಂತಲಾ ಮಡಿವಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.