ADVERTISEMENT

ಬಹರೇನ್‌ನಲ್ಲಿ ಕನ್ನಡ ಡಿಂಡಿಮ

ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ವಿ.ವಿ. ದಂಡು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಸೆಪ್ಟೆಂಬರ್ 2018, 19:45 IST
Last Updated 28 ಸೆಪ್ಟೆಂಬರ್ 2018, 19:45 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಲೋಗೋ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಲೋಗೋ   

ಹೊಸಪೇಟೆ: ಬಹರೇನ್‌ನಲ್ಲಿ ಅ. 5 ಮತ್ತು 6ರಂದು ನಡೆಯಲಿರುವ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿ ಕನ್ನಡದ ಕಂಪು ಹರಡಲು ಸಜ್ಜಾಗಿದ್ದಾರೆ.

ಸಾಗರದಾಚೆ ನೆಲೆಸಿರುವ ರಾಜ್ಯದ ಜನರಿಗೆ ಕನ್ನಡದ ಹಿರಿಮೆ–ಗರಿಮೆಯನ್ನು ಪರಿಚಯಿಸಲು ಬಹರೇನ್‌ ಕನ್ನಡ ಸಂಘ ಹಾಗೂ ಹಂಪಿ ಕನ್ನಡ ವಿ.ವಿ. ಸಹಭಾಗಿತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಹಮ್ಮಿಕೊಂಡಿದೆ. ಈ ಸಮ್ಮೇಳನಕ್ಕೆ ಕನ್ನಡ ವಿ.ವಿ. ಕುಲಪತಿ, ಕುಲಸಚಿವರು ಸೇರಿದಂತೆ ಒಟ್ಟು 17 ಜನ ಪ್ರಾಧ್ಯಾಪಕರು ಅ. 4ರಂದು ಬೆಂಗಳೂರಿನಿಂದ ಬಹರೇನ್‌ಗೆ ಪ್ರಯಾಣ ಬೆಳೆಸುವರು.

ವಿ.ವಿ.ಯಿಂದ ₨20 ಲಕ್ಷ:

ADVERTISEMENT

‘ಅನ್ಯ ದೇಶಗಳಲ್ಲಿ ಅಕಾಡೆಮಿಕ್‌, ಕನ್ನಡಕ್ಕೆ ಸಂಬಂಧಿಸಿದ ಸಾಹಿತ್ತಿಕ ಚಟುವಟಿಕೆಗಳನ್ನು ನಡೆಸಲು ಯು.ಜಿ.ಸಿ. ₨20 ಲಕ್ಷ ನೀಡುತ್ತದೆ. ಆದರೆ, ಇದೇ ಮೊದಲ ಸಲ ಅಷ್ಟೂ ಹಣವನ್ನು ಸದ್ಭಳಕೆ ಮಾಡಿಕೊಂಡು, ಅನುಭವಿ ಪ್ರಾಧ್ಯಾಪಕರನ್ನು ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗುತ್ತಿದೆ. ಕುಲಪತಿಯೊಬ್ಬರ ಸಂಪೂರ್ಣ ಖರ್ಚು ಕನ್ನಡ ಸಾಹಿತ್ಯ ಪರಿಷತ್ತು ಭರಿಸುತ್ತದೆ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ವಿವರಿಸಿದರು.

‘ತನ್ನ ಕೆಲಸದ ಮೂಲಕ ಭಾರತದಲ್ಲಿ ಕನ್ನಡ ವಿ.ವಿ. ತನ್ನದೇ ಆದ ಸ್ಥಾನಮಾನ ಪಡೆದುಕೊಂಡಿದೆ. ಅನ್ಯ ದೇಶಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬಿಂಬಿಸಿಕೊಂಡಿರಲಿಲ್ಲ. ಆ ದೇಶದ ಜನ ಅಭಿಮಾನ ಇಟ್ಟುಕೊಂಡು ನಮ್ಮನ್ನು ಆಹ್ವಾನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.

ಭಾಗವಹಿಸುವವರು:

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರೆ, ಸಮಾರೋಪದಲ್ಲಿ ಕುಲಸಚಿವ ಮಂಜುನಾಥ ಬೇವಿನಕಟ್ಟಿ ಭಾಗವಹಿಸುವರು.

ಸಮ್ಮೇಳನದಲ್ಲಿ ಒಟ್ಟು ಐದು ಗೋಷ್ಠಿಗಳು ನಡೆಯಲಿದ್ದು, ‘ವಿಶ್ವಭಾರತಿಗೆ ಕನ್ನಡದಾರತಿ’,‘ಜಾಗತೀಕರಣ ಮತ್ತು ಭಾಷಾ ಬಿಕ್ಕಟ್ಟು’, ‘ವಲಸೆ ಕನ್ನಡಿಗರು ಮತ್ತು ಸಾಂಸ್ಕೃತಿಕ ಬಿಕ್ಕಟ್ಟು’ ಮೂರು ಗೋಷ್ಠಿಗಳಲ್ಲಿ ಕನ್ನಡ ವಿ.ವಿ. ಪ್ರಾಧ್ಯಾಪಕರೇ ಪ್ರಬಂಧಗಳನ್ನು ಮಂಡಿಸಲಿರುವುದು ವಿಶೇಷ. ಇನ್ನು ವಿ.ವಿ.ಯ ಸಂಗೀತ ವಿಭಾಗದ ಪ್ರಾಧ್ಯಾಪಕಿ ಜಯದೇವಿ ಜಂಗಮಶೆಟ್ಟಿ ಅವರು ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.

ಪ್ರಾಧ್ಯಾಪಕರಾದ ಚಂದ್ರ ಪೂಜಾರಿ, ಅಮರೇಶ ನುಗಡೋಣಿ, ಪಾಂಡುರಂಗಬಾಬು, ಸಿ. ಮಹಾದೇವ, ಸಿದ್ದಗಂಗಮ್ಮ, ಎಂ. ಉಷಾ, ಪಿ. ಮಹಾದೇವಯ್ಯ, ಸಾಂಬಮೂರ್ತಿ, ವೆಂಕಟಗಿರಿ ದಳವಾಯಿ, ಅಶೋಕಕುಮಾರ ರಂಜೇರೆ, ಎಚ್‌.ಡಿ. ಪ್ರಶಾಂತ್‌, ಮೋಹನ್‌ ಕುಂಟಾರ, ಕೆ. ರವೀಂದ್ರನಾಥ, ಶಿವಾನಂದ ವಿರಕ್ತಮಠ ಅವರು ಪ್ರಬಂಧಗಳನ್ನು ಮಂಡಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.