ADVERTISEMENT

ವಂಚನೆ: ಜಾಮೀನು ನಿರಾಕರಣೆ

ವಂಚನೆ: ಸಿಂಡಿಕೇಟ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ನಿರೀಕ್ಷಣಾ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 21:59 IST
Last Updated 17 ಫೆಬ್ರುವರಿ 2020, 21:59 IST

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ ₹ 48 ಕೋಟಿ ನಿಶ್ಚಿತ ಠೇವಣಿ (ಎಫ್‌ಡಿ) ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಿದ್ದ ಪ್ರಕರಣದಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಉತ್ತರಹಳ್ಳಿ ಶಾಖೆ ಮುಖ್ಯ ವ್ಯವಸ್ಥಾಪಕ ಮಂಜುನಾಥ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ 60ನೇ ಹೆಚ್ಚುವರಿ ಸೆಷನ್‌ ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದ 2ನೇ ಆರೋಪಿ ಆಗಿರುವ ಮಂಜುನಾಥ್‌ ಜಾಮೀನು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು. ಕೇಂದ್ರ ಅಪರಾಧ ದಳ (ಸಿಸಿಬಿ) ಪರ ವಕೀಲರಾದ ಶೈಲಜಾ ಕೃಷ್ಣ ನಾಯಕ್‌ ವಾದಿಸಿದ್ದರು. ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಜಾಮೀನು ನೀಡಲು ನಿರಾಕರಿಸಿದ್ದಾರೆ.

ಮಂಡಳಿಯ ₹ 100 ಕೋಟಿ ಅನ್ನು ನಿಶ್ಚಿತ ಠೇವಣಿ ಇರಿಸುವ ಬದಲು ಮಂಜುನಾಥ್ ಮತ್ತು ಅದೇ ಬ್ಯಾಂಕಿನ ಉಪ ವ್ಯವಸ್ಥಾಪಕ ಜಯರಾಮ್‌ ಅವರು ಮಂಡಳಿಯ ಫೈನಾನ್ಸ್‌ ಅಧಿಕಾರಿ ಹುದ್ದೆಯಡಿ ಮಹಮ್ಮದ್‌ ಮುಸ್ತಫಾ ಎಂಬ ಹೆಸರಿನಲ್ಲಿ ನಕಲಿ ಚಾಲ್ತಿ ಖಾತೆ ತೆರೆದು ಹಣ ವರ್ಗಾಯಿಸಿದ್ದರು. ಬಳಿಕ, ಈ ಮೊತ್ತದಲ್ಲಿ ₹ 48 ಕೋಟಿಯನ್ನು ಚೆನ್ನೈ ನಗರದ 106 ಇತರ ಚಾಲ್ತಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ.

ADVERTISEMENT

ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳು ತಲೆಮರೆಸಿ ಕೊಂಡಿದ್ದರು. ಜಯರಾಮ್ ಅಲ್ಲದೆ, ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ (ಡಿಜಿಎಂ) ಸಿದ್ದಗಂಗಯ್ಯ, ಭರತ್, ಮುಸ್ತಫಾ, ಮಹಮ್ಮದ್ ಅಸ್ಲಾಂ, ರೇವಣ್ಣ, ನಿವೃತ್ತ ಉಪನಿಯಂತ್ರಕ ಲಕ್ಷ್ಮಣ, ಆಂಧ್ರ ಬ್ಯಾಂಕ್‌ ವ್ಯವಸ್ಥಾಪಕ ಸಿರಿಲ್ ಲಕ್ಷ್ಮಣ, ಸಿರಿಲ್‌ ರನ್ನು ಸಿಸಿಬಿ ಈಗಾಗಲೇ ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.