ADVERTISEMENT

5ಕ್ಕೆ ಸೌಹಾರ್ದ ಸಂಸ್ಕೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 3 ಮೇ 2022, 4:02 IST
Last Updated 3 ಮೇ 2022, 4:02 IST

ಬೆಂಗಳೂರು:ರಾಜ್ಯದಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷ ತಡೆಗೆ ಪರಿಹಾರ ಕಂಡುಕೊಳ್ಳುವ ಆಶಯದೊಂದಿಗೆ ವಿವಿಧ ಧಾರ್ಮಿಕ, ಕಾರ್ಮಿಕ, ದಲಿತ, ಸಾಹಿತ್ಯ, ಮಹಿಳಾ ಸಂಘಟನೆಗಳು ಒಗ್ಗೂಡಿ ‘ಸೌಹಾರ್ದ ಸಂಸ್ಕೃತಿ ಸಮಾವೇಶ’ವನ್ನು ಇದೇ 5ರಂದು ಸಂಜೆ 4.30ಕ್ಕೆ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿವೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್, ‘ಸರ್ವ ಸಮುದಾಯಗಳನ್ನು ಪ‍್ರತಿನಿಧಿಸುವ ಧರ್ಮಗುರುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಬೇಕೆಂಬ ಕಳಕಳಿಯ ಸಂದೇಶ ನೀಡಲಿದ್ದಾರೆ’ ಎಂದರು.

‘ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಬೇಕಿದೆ.‘ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವುದು ಬೇಡ’ ಎನ್ನುವುದೇ ಸಮಾವೇಶದ ಪ್ರಧಾನ ಸಂದೇಶ’ ಎಂದು ಹೇಳಿದರು.

ADVERTISEMENT

‘ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್‌ ಭಾಗವಹಿಸಲಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳನ್ನಾಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.